ಸಮಗ್ರ ನ್ಯೂಸ್ : ದೇಶದ ಮೊದಲ ರಕ್ಷಣಾ ಸಿಬ್ಬಂದಿ ಜನರಲ್ ಬಿಪಿನ್ ರಾವತ್ ಅವರು ಮೃತಪಟ್ಟು ಮೂರು ವರ್ಷಗಳು ಕಳೆದಿದೆ. 2021ರ ಡಿ.8 ರಂದು ಹೆಲಿಕಾಪ್ಟರ್ ಪತನಗೊಂಡು ಅವರ ಪತ್ನಿ ಸೇರಿ ಒಟ್ಟು 13 ಮಂದಿ ಮೃತಪಟ್ಟಿದ್ದರು.ನಂತರ ಅಪಘಾತದ ಹಿಂದಿನ ಕಾರಣವನ್ನು ತನಿಖೆ ಮಾಡಲು ಸಮಿತಿಯೊಂದನ್ನು ರಚಿಸಲಾಗಿತ್ತು.
ಇದೀಗ ಸಮಿತಿಯ ವರದಿ ಬಂದಿದ್ದು, ಅಪಘಾತದ ಹಿಂದಿನ ಕಾರಣ “ಮಾನವ ದೋಷ” ಎಂದು ಹೇಳಿದೆ.ಹವಾಮಾನದಲ್ಲಿ ಏರುಪೇರಾದ್ದರಿಂದ ಪೈಲಟ್‌ನ ದಿಗ್ಧಮೆಯಿಂದಾಗಿ ಅಪಘಾತ ಸಂಭವಿಸಿದೆ ಎಂದು 2022ರಲ್ಲಿ ಭಾರತೀಯ ವಾಯುಪಡೆ ಹೇಳಿತ್ತು. ಭಾರತೀಯ ವಾಯು ಪಡೆ ತನಿಖೆಯು ಅಪಘಾತಕ್ಕೆ ನಿರ್ಲಕ್ಷ್ಯ, ಯಾಂತ್ರಿಕ ವೈಫಲ್ಯ ಅಥವಾ ವಿಧ್ವಂಸಕತೆ ಇರಬಹುದು ಎಂಬ ಊಹೆಯನ್ನು ತಳ್ಳಿ ಹಾಕಿದೆ.ಮಂಗಳವಾರ ಸಂಸತ್ತಿನಲ್ಲಿ ಮಂಡಿಸಿದ ವರದಿಯಲ್ಲಿ, 2017-22ರ ಅವಧಿಯಲ್ಲಿ ಭಾರತೀಯ ವಾಯುಪಡೆಯ 34 ವಿಮಾನ ಅಪಘಾತಗಳಿಗೆ ಕಾರಣಗಳನ್ನು ಪಟ್ಟಿ ಮಾಡಿದೆ.
ಇವುಗಳಲ್ಲಿ ಮಾನವ ದೋಷ ಹೆಲಿಕಾಪ್ಟರ್ ಸಿಬ್ಬಂದಿಯಿಂದ ಆಗಿರುವ ತಪ್ಪುಗಳು, ತಾಂತ್ರಿಕ ದೋಷ, ವಿದೇಶಿ ವಸ್ತು ಹಾನಿ ಮತ್ತು ಪಕ್ಷಿಗಳ ಹೊಡೆತ ಸೇರಿವೆ. ಕೆಲವು ಅಪಘಾತಗಳು ಇನ್ನೂ ತನಿಖೆಯ ಹಂತದಲ್ಲಿವೆ.ರಾವತ್ ಅವರು ಪ್ರಯಾಣ ಮಾಡುತ್ತಿದ್ದ Mi- 17 V5 ಹೆಲಿಕಾಪ್ಟರ್ ಅಪಘಾತಕ್ಕೆ ಮಾನವ ದೋಷ ಕಾರಣಾಗಿದೆ ಎಂದು ವರದಿ ಹೇಳಿದೆ. ಅತ್ಯಂತ ಸುರಕ್ಷಿತ ಹಾಗೂ ವಿಶ್ವಾಸಾರ್ಹವೆಂದು ಪರಿಗಣಿಸಲಾಗಿದ್ದ ರಷ್ಯಾ ಮೂಲದ ಹೆಲಿಕಾಪ್ಟಾರ್ ತಮಿಳು ನಾಡಿನ ಕೂನೂರು ಬಳಿ ಅಪಘಾತಕ್ಕೀಡಾಗಿತ್ತು. ಹೆಲಿಕಾಪ್ಟರ್ ಸೂಲೂರು ವಾಯುನೆಲೆಯಿಂದ ಬೆಳಗ್ಗೆ 11.48ಕ್ಕೆ ಹೊರಟು ಮಧ್ಯಾಹ್ನ 12.15ಕ್ಕೆ ವೆಲ್ಲಿಂಗ್ಟನ್ ಗಾಲ್ಫ್ ಕೋರ್ಸ್‌ನಲ್ಲಿರುವ ಹೆಲಿಪ್ಯಾಡ್‌ನಲ್ಲಿ ಇಳಿಯಬೇಕಿತ್ತು.
ಸೂಲೂರಿನ ಏರ್ ಟ್ರಾಫಿಕ್ ಕಂಟ್ರೋಲ್, ಹೆಲಿಕಾಪ್ಟರ್ ಟೇಕ್ ಆಫ್ ಆದ 20 ನಿಮಿಷಗಳ ನಂತರ ಮಧ್ಯಾಹ್ನ 12.08 ಕ್ಕೆ ಸಂಪರ್ಕ ಕಳೆದುಕೊಂಡಿತು.ಅಪಘಾತದಲ್ಲಿ ರಾವತ್ ಸೇರಿದಂತೆ, ಪತ್ನಿ ಮಧುಲಿಕಾ ರಾಜೇ ಸಿಂಗ್ ರಾವತ್, ಅವರ ರಕ್ಷಣಾ ಸಹಾಯಕ ಬ್ರಿಗೇಡಿಯರ್ ಎಲ್‌ಎಸ್ ಲಿಡ್ಕರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್, ಎಂಐ-17ವಿ5 ಪೈಲಟ್, ಸ್ಕ್ಯಾಡ್ರನ್ ಲೀಡರ್ ಕುಲದೀಪ್ ಸಿಂಗ್, ಸಹ ಪೈಲಟ್, ಕಿರಿಯ ವಾರಂಟ್ ಅಧಿಕಾರಿ ರಾಣಾ ಪ್ರತಾಪ್ ದಾಸ್, ಕಿರಿಯ ವಾರಂಟ್ ಅಧಿಕಾರಿ ಅರಕ್ಕಲ್ ಪ್ರದೀಪ್, ಹವಾಲ್ದಾರ್ ಸತ್ಪಾಲ್ ರೈ, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದ್ರ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಮತ್ತು ಲ್ಯಾನ್ಸ್ ನಾಯಕ್ ಬಿ ಸಾಯಿ ತೇಜ ಮೃತಪಟ್ಟಿದ್ದರು.