ಸಮಗ್ರ ನ್ಯೂಸ್ : ಮಹಾರಾಷ್ಟ್ರದಲ್ಲಿ ಮಹಾಯುತಿ ಅಧಿಕಾರಕ್ಕೆ ಬಂದು ಒಂದು ತಿಂಗಳಾದರೂ ಸರ್ಕಾರ ರಚನೆಯಲ್ಲಿನ ಗೊಂದಲ ಹಾಗೂ ತೊಡಕು ಕೊನೆಯಾಗುತ್ತಿಲ್ಲ. ಮಹಾರಾಷ್ಟ್ರದಲ್ಲಿ ಡಿಸೆಂಬರ್ 15ಕ್ಕೆ ಸಚಿವ ಸಂಪುಟ ವಿಸ್ತರಣೆಯಾಗಿದೆ. ಇದರಲ್ಲಿ 39 ಶಾಸಕರು ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಇದರ ಬೆನ್ನಲ್ಲೇ ಮಹಾರಾಷ್ಟ್ರ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದ್ದು, ಖಾತೆ ಹಂಚಿಕೆಯಾಗುವುದಕ್ಕೂ ಮೊದಲೇ ಮಹಾಯುತಿ (ಬಿಜೆಪಿ, ಶಿವಸೇನಾ ಹಾಗೂ ನ್ಯಾಷನಲಿಸ್ಟ್ ಕಾಂಗ್ರೆಸ್) ಪಾರ್ಟಿಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಮಹಾರಾಷ್ಟ್ರದಲ್ಲಿ ನವೆಂಬರ್ 23ಕ್ಕೆ ಚುನಾವಣೆ ಫಲಿತಾಂಶ ಪ್ರಕಟವಾಗಿ ಮಹಾಯುತಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಸಮೀಪಿಸುತ್ತಿದ್ದರೂ ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾಗಳು ಕೊನೆಯಾಗುತ್ತಿಲ್ಲ.ಖಾತೆ ಹಂಚಿಕೆಯಲ್ಲಿ ಭಾರೀ ಗೊಂದಲಗಳು ಸೃಷ್ಟಿಯಾಗಿದ್ದು, ಮಹಾಯುತಿ ಮೈತ್ರಿಕೂಟದಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿದೆ.
ಇದರ ಬೆನ್ನಲ್ಲೇ ಶಿವಸೇನೆಯ ಶಾಸಕರೊಬ್ಬರು ಶಿವಸೇನೆ ಪಕ್ಷಕ್ಕೆ ರಾಜೀನಾಮೆ ಕೊಟ್ಟು ದೊಡ್ಡ ಶಾಕ್ ಕೊಟ್ಟಿದ್ದಾರೆ. ಮಹಾರಾಷ್ಟ್ರದ ಸಚಿವ ಸಂಪುಟ ವಿಸ್ತರಣೆ ಮಾಡುವ ಸಂದರ್ಭದಲ್ಲಿ ಯಾವುದೇ ಸ್ಥಾನ ಸಿಕ್ಕಿಲ್ಲ ಎಂದು ಶಿವಸೇನೆಯ ಉಪ ನಾಯಕ ಹಾಗೂ ಶಾಸಕ ನರೇಂದ್ರ ಭೋಂಡೇಕರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಈ ವಿಷಯ ಮಹಾ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮಹಾರಾಷ್ಟ್ರದಲ್ಲಿ ಮಹಾಯುತಿ ಅಧಿಕಾರಕ್ಕೆ ಬಂದು ಇನ್ನೂ ಒಂದು ತಿಂಗಳು ಸಹ ಆಗಿಲ್ಲ ಆಗಲೇ ಪಕ್ಷದಲ್ಲಿ ಮೊದಲ ವಿಕೆಟ್ ಪತನವಾಗಿದೆ.ಈಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಿತ್ರಪಕ್ಷಗಳು ಅಮೋಘ ಸಾಧನೆ ಮಾಡಿದ್ದವು.
ಇಲ್ಲಿ ಬಿಜೆಪಿ ನೇತೃತ್ವದ ಮಹಾಯುತಿಯು ಅಧಿಕಾರಕ್ಕೆ ಬರುವ ಮೂಲಕ ಕಾಂಗ್ರೆಸ್ ನೇತೃತ್ವದ ಮಹಾವಿಕಾಸ್ ಅಘಾಡಿ ಧೂಳಿಪಟವಾಗಿತ್ತು. ಇದರ ಬೆನ್ನಲ್ಲೇ ಮಹಾವಿಕಾಸ್ ಅಘಾಡಿಯಲ್ಲೂ ಬಿರುಕು ಮೂಡಿದೆ.ಆದರೆ, ಕಳೆದ ಬಾರಿಗಿಂತ ಈ ಬಾರಿ ಬಿಜೆಪಿಗೆ ಹೆಚ್ಚು ಸ್ಥಾನಗಳು ಬಂದಿದ್ದು, ಬಿಜೆಪಿಯಿಂದ ದೇವೇಂದ್ರ ಫಡ್ನವಿಸ್ ಅವರು ಮುಖ್ಯಮಂತ್ರಿಯಾಗಿದ್ದಾರೆ. ಅಜಿತ್ ಪವಾರ್ ಹಾಗೂ ಏಕನಾಥ್ ಶಿಂಧೆ ಅವರು ಉಪ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಸರ್ಕಾರ ರಚನೆಯಲ್ಲಿ ಈ ಮೈತ್ರಿಕೂಟ ಎಡವಟ್ಟು ಮಾಡಿಕೊಳ್ಳುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.ಇಲ್ಲಿನ ಭಂಡಾರ- ಪಾವನಿ ವಿಧಾನಸಭಾ ಕ್ಷೇತ್ರದ ಶಿವಸೇನೆ ಪಕ್ಷದ ಶಾಸಕ ನರೇಂದ್ರ ಭೋಂಡೇಕರ್ ಅವರು ಪಕ್ಷಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.
ಆದರೆ, ಇಲ್ಲಿನ ವಿಧಾನಸಭೆಗೆ ರಾಜೀನಾಮೆ ಕೊಟ್ಟಿಲ್ಲ. ಹೀಗಾಗಿ, ಮುಂದೆ ಸಚಿವ ಸ್ಥಾನ ಬಂದರೆ ಅವರು ಮರಳಿ ಬರಲಿದ್ದಾರೆಯೇ ಎನ್ನುವುದ ಕಾದು ನೋಡಬೇಕಿದೆ.ಶಿವಸೇನೆಯ ಶಾಸಕರಾದ ನರೇಂದ್ರ ಭೋಂಡೇಕರ್ ಅವರಿಗೆ ಸಚಿವ ಸ್ಥಾನ ನೀಡಲಾಗುವುದು ಎಂದು ಹೇಳಿ ಕೊಟ್ಟಿರಲಿಲ್ಲ ಎನ್ನಲಾಗಿದೆ. ಈ ಕಾರಣಕ್ಕಾಗಿ ಆಕ್ರೋಶಗೊಂಡಿರುವ ಅವರು ಶಿವಸೇನೆ (ಏಕನಾಥ್ ಶಿಂಧೆ ಬಣ)ಗೆ ರಾಜೀನಾಮೆ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಶಿವಸೇನೆಯಿಂದ ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. ಕಳೆದ ಬಾರಿ ಮಹಾಯುತಿ ಶಾಸಕರ ಸಂಖ್ಯೆ ಕಳೆದ ಬಾರಿಗಿಂತ ಕಡಿಮೆ ಇತ್ತು. ಅಲ್ಲದೆ ಕಳೆದ ಬಾರಿ ಭಾರೀ ಡಿಮ್ಯಾಂಡ್ ಇರಲಿಲ್ಲ. ಏಕೆಂದರೆ ಅದು ಅನಿರೀಕ್ಷಿತ ಸರ್ಕಾರವಾಗಿತ್ತು.