ಸಮಗ್ರ ನ್ಯೂಸ್ : ಬಾಂಗ್ಲಾದೇಶದಲ್ಲಿ ದೌರ್ಜನ್ಯ ಎದುರಿಸುತ್ತಿರುವ ಹಿಂದೂಗಳು ಮತ್ತು ಕ್ರಿಶ್ಚಿಯನ್ನರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ಕಾಂಗ್ರೆಸ್ ಸಂಸದರು ಮಂಗಳವಾರ ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
‘ಸ್ಟ್ಯಾಂಡ್ ವಿತ್ ಮೈನಾರಿಟೀಸ್ ಬಾಂಗ್ಲಾದೇಶ’ ಎಂದು ಬರೆದಿರುವ ಕೈಚೀಲಗಳೊಂದಿಗೆ ಸಂಸದರು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು.ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಸಂಸತ್ತಿಗೆ ಕೆನೆ ಬಣ್ಣದ ಕೈಚೀಲವನ್ನು ಹೊತ್ತುಕೊಂಡು ಆಗಮಿಸಿದ್ದರು.
ಅದರ ಮೇಲೆ “ಬಾಂಗ್ಲಾದೇಶ ಕೆ ಹಿಂದೂ ಔರ್ ಇಸೈಯೋಂ ಕೆ ಸಾಥ್ ಖಡೇ ಹೋ” (ಬಾಂಗ್ಲಾದೇಶದ ಹಿಂದೂಗಳು ಮತ್ತು ಕ್ರಿಶ್ಚಿಯನ್ನರೊಂದಿಗೆ ನಿಂತುಕೊಳ್ಳಿ) ಎಂದು ಬರೆಯಲಾಗಿದೆ.ಪ್ಯಾಲೆಸ್ತೀನಿಯರನ್ನು ಬೆಂಬಲಿಸಿ ನಿನ್ನೆ ಪ್ರಿಯಾಂಕಾ ಗಾಂಧಿ ಸಂಸತ್ತಿಗೆ, ‘ಪ್ಯಾಲೆಸ್ತೀನ್’ ಎಂದು ಬರೆದಿದ್ದ ಬ್ಯಾಗ್ ನ್ನು ಹಿಡಿದುಕೊಂಡು ಬಂದಿದ್ದು ವ್ಯಾಪಕವಾಗಿ ಸುದ್ದಿಯಾಗಿತ್ತು. ಬಾಂಗ್ಲಾದೇಶದಲ್ಲಿ ದೌರ್ಜನ್ಯ ಎದುರಿಸುತ್ತಿರುವ ಹಿಂದೂಗಳು ಮತ್ತು ಕ್ರೈಸ್ತರಿಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಹಲವು ಕಾಂಗ್ರೆಸ್ ಸಂಸದರು ನಿನ್ನೆಯೂ ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು.
ನಿನ್ನೆ ಶೂನ್ಯವೇಳೆಯಲ್ಲಿ ಲೋಕಸಭೆಯಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಬಾಂಗ್ಲಾದೇಶದ ದಾಳಿಯಿಂದ ನೊಂದವರಿಗೆ ಸರ್ಕಾರದ ಬೆಂಬಲ ಕೋರಿದ್ದರು.ಸರ್ಕಾರವು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು, ಹಿಂದೂಗಳು ಮತ್ತು ಕ್ರಿಶ್ಚಿಯನ್ನರ ಮೇಲಿನ ದೌರ್ಜನ್ಯದ ವಿಷಯವನ್ನು ಎತ್ತಬೇಕು. ಅದು ಬಾಂಗ್ಲಾದೇಶ ಸರ್ಕಾರದೊಂದಿಗೆ ಚರ್ಚಿಸಬೇಕು ಮತ್ತು ನೋವಿನಲ್ಲಿರುವವರಿಗೆ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದ್ದರು.