ಸಮಗ್ರ ನ್ಯೂಸ್: ವಿವಾಹ ಆಹ್ವಾನ ಪತ್ರಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಮತಯಾಚನೆ ಸಂಬಂಧ ದಾಖಲಾದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ. ನ್ಯಾ. ನಾಗಪ್ರಸನ್ನ ಅವರ ಪೀಠ ಈ ತೀರ್ಪು ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಆಲಂತಾಯ ಗ್ರಾಮದ ಶಿವಪ್ರಸಾದ್ ಅವರು ತಮ್ಮ ಮದುವೆಯ ಆಹ್ವಾನ ಪತ್ರಿಕೆಯಲ್ಲಿ, “ನಿಮ್ಮ ಉಡುಗೊರೆಯಾಗಿ ಮೋದಿಗೆ ಮತ ನೀಡಿ” ಎಂಬ ಸಂದೇಶವನ್ನು ಮುದ್ರಿಸಿದ್ದರು. 2024ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ಸುಳ್ಯ ಕ್ಷೇತ್ರದ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಕೆ.ಎನ್. ಸಂದೇಶ್ ಅವರು ದೂರು ದಾಖಲಿಸಿದ್ದರು.
ಪ್ರಜಾಪ್ರತಿನಿಧಿ ಕಾಯಿದೆ 127ಎ ಪ್ರಕಾರ, ಈ ವಿಚಾರದಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ಶಿವಪ್ರಸಾದ್ ಪರ ವಕೀಲರಾದ ಎಂ. ವಿನೋದ್ ಕುಮಾರ್, ಈ ಆಹ್ವಾನ ಪತ್ರಿಕೆ 2024ರ ಚುನಾವಣೆ ಘೋಷಣೆಯಾಗುವು ದಕ್ಕೂ ಮುಂಚೆ ಅಂದರೆ ಮಾರ್ಚ್ 1ರಂದು ಮುದ್ರಣಗೊಂಡಿರುವುದರಿಂದ ಇದು ಯಾವ ನಿಯಮವನ್ನು ಉಲ್ಲಂಘಿಸುತ್ತಿಲ್ಲ ಎಂದು ವಾದಿಸಿದ್ದರು.
ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್ 127ಎ ಚುನಾವಣಾ ಸಮಯದಲ್ಲಿ ಮಾಡಲಾದ ಪ್ರಚಾರಕ್ಕೆ ಅನ್ವಯವಾಗುತ್ತದೆ. ಆದರೆ ಚುನಾವಣೆಗೆ ಮುಂಚೆ ಇದನ್ನು ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ವಾದ ಮಂಡಿಸಿದ್ದರು.
ಈ ವಾದವನ್ನು ಸ್ವೀಕರಿಸಿದ ಹೈಕೋರ್ಟ್, ‘ಚುನಾವಣೆ ಘೋಷಣೆಯ ಮುಂಚಿನ ಸಮಯದಲ್ಲಿ ಇಂತಹ ಸಂದೇಶ ಮುದ್ರಿಸುವುದು ಅಪರಾಧವಲ್ಲ’ ಎಂದು ಅಭಿಪ್ರಾಯಪಟ್ಟಿದೆ. ಹೀಗಾಗಿ ಪುತ್ತೂರು ನ್ಯಾಯಾಲಯದಲ್ಲಿದ್ದ ಪ್ರಕರಣವನ್ನು ರದ್ದುಗೊಳಿಸಿ ಆದೇಶ ನೀಡಿದೆ.