ಸಮಗ್ರ ನ್ಯೂಸ್: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಇನ್ನೆರಡು ದಿನ ಮುಂದುವರಿಯಲಿದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಮಂಡ್ಯ, ಚಾಮರಾಜನಗರ ಸೇರಿ ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಗುರುವಾರ(ಡಿ.12) ತುಸು ಬಿರುಸಾಗಿ ವರ್ಷಧಾರೆಯಾಗಿದೆ.
ಬೆಂಗಳೂರು ನಗರ, ಬೆಂ,ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು ಮತ್ತು ತುಮಕೂರಿನಲ್ಲಿ ಡಿ.13 ಮತ್ತು ಡಿ.18ರಂದು ಬಿರುಸಾಗಿ ವರ್ಷಧಾರೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಮುಂದಿನ 48 ಗಂಟೆ ಸಾಧಾರಣ ವರ್ಷಧಾರೆಯಾಗಲಿದೆ. ಡಿ.15ರಿಂದ ಡಿ.17ರವರೆಗೆ ರಾಜ್ಯದಲ್ಲಿ ಒಣಹವೆ ಇದ್ದರೆ, ಡಿ.18ರಿಂದ ರಾಜ್ಯಾದ್ಯಂತ ಮತ್ತೆ ಮಳೆ ಶುರುವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ವರ್ಷಧಾರೆಯಿಂದಾಗಿ ಚಳಿ ಹೆಚ್ಚಾಗಿದ್ದು, ಹಲವು ಜಿಲ್ಲೆಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಇಳಿಕೆ ಕಂಡಿದೆ. ಬೆಂಗಳೂರು, ಮಂಡ್ಯ, ರಾಯಚೂರು, ಮಂಗಳೂರು, ಚಿತ್ರದುರ್ಗದಲ್ಲಿ ಕನಿಷ್ಠ ತಾಪಮಾನದಲ್ಲಿ ಸರಾಸರಿ 3-4 ಡಿ.ಸೆ.ಉಷ್ಣಾಂಶ ಕುಸಿತವಾಗಿತ್ತು. ಮುಂದಿನ 2 ದಿನ ಮೋಡ ಕವಿದ ವಾತಾವರಣ ಇರುವ ಜತೆಗೆ ಇನ್ನಷ್ಟು ತಾಪಮಾನ ಕುಸಿತವಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮಾಹಿತಿ ನೀಡಿದೆ.