ಸಮಗ್ರ ನ್ಯೂಸ್ : ಶ್ರೀಲಂಕಾದ ನೂತನ ಅಧ್ಯಕ್ಷ ಅನುರಾಕುಮಾರ ದಿಸ್ಸನಾಯಕೆ ಅವರು ಡಿ.15ರಿಂದ 17ರವರೆಗೆ ಭಾರತ ಪ್ರವಾಸ ಹಮ್ಮಿಕೊಂಡಿದ್ದಾರೆ. ದಿಸ್ಸನಾಯಕೆ ಅವರು ಶ್ರೀಲಂಕಾದ ಅಧ್ಯಕ್ಷ ಸ್ಥಾನಕ್ಕೆ ಏರಿದ ಮೇಲಿನ ಪ್ರಥಮ ವಿದೇಶ ಪ್ರವಾಸ ಇದಾಗಿದೆ.
ಅಧಿಕಾರ ವಹಿಸಿಕೊಂಡ ಬಳಿಕದ ಮೊದಲ ವಿದೇಶ ಪ್ರವಾಸಕ್ಕೆ ಭಾರತವನ್ನೇ ಆಯ್ಕೆ ಮಾಡಿಕೊಂಡಿದ್ದು ವಿಶೇಷವಾಗಿದೆ.ಮಾರ್ಕ್ಸ್ವಾದಿ ನಾಯಕ ಅನುರಾ ಕುಮಾರ ದಿಸ್ಸನಾಯಕೆ ಅವರು ಭಾರತ ಪ್ರವಾಸದ ವೇಳೆ ಪ್ರಧಾನಿ ಮೋದಿಯವರನ್ನ ಮತ್ತು ರಾಷ್ಟ್ರಪತಿ ಬ್ರೌಪದಿ ಮುರ್ಮು ಅವರನ್ನ ಭೇಟಿ ಮಾಡುವರು ಎಂದು ಶ್ರೀಲಂಕಾ ಸರ್ಕಾರದ ಕ್ಯಾಬಿನೆಟ್ ವಕ್ತಾರ ನಳಿಂದ ಜಯತಿಸ್ಸ ತಿಳಿಸಿದ್ದಾರೆ. ಅನುರಾ ಕುಮಾರ ದಿಸ್ಸನಾಯಕೆ ಅವರೊಂದಿಗೆ ಶ್ರೀಲಂಕಾದ ವಿದೇಶಾಂಗ ವ್ಯವಹಾರಗಳ ಸಚಿವ ವಿಜಿತ ಹೆರಾತ್ ಮತ್ತು ಹಣಕಾಸು ಖಾತೆಯ ಉಪ ಸಚಿವ ಅನಿಲ್ ಜಯಂತ ಫೆರ್ನಾಂಡೋ ಕೂಡ ಭಾರತಕ್ಕೆ ಆಗಮಿಸಲಿದ್ದಾರೆ.
ಶ್ರೀಲಂಕಾದಲ್ಲಿ ಈ ವರ್ಷ ಸೆಪ್ಟೆಂಬರ್‌ನಲ್ಲಿ ದಿಸ್ಸನಾಯಕೆ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪವರ್ (NPP) ಸರ್ಕಾರ ಅಧಿಕಾರಕ್ಕೆ ಬಂದಿದೆ. ಅದೇ ತಿಂಗಳಲ್ಲಿಯೇ ದಿಸ್ಸನಾಯಕೆ ಅವರು ಶ್ರೀಲಂಕಾ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದರು. ಅನುರಾ ಕುಮಾರ ದಿಸ್ಸನಾಯಕೆ ಪ್ರಮಾಣ ವಚನ ಸ್ವೀಕಾರ ಮಾಡಿದ 15 ದಿನಗಳಲ್ಲಿ ಕೇಂದ್ರ ವಿದೇಶಾಂಗ ಸಚಿವರಾದ ಎಸ್.ಜೈಶಂಕರ್ ಅವರು ಶ್ರೀಲಂಕಾಕ್ಕೆ ಭೇಟಿ ನೀಡಿದ್ದರು. ಅದೇ ಸಮಯದಲ್ಲಿಯೇ ದಿಸ್ಸನಾಯಕೆ ಅವರಿಗೆ ಆಹ್ವಾನ ನೀಡಿದ್ದರು.
2022ರಲ್ಲಿ ಶ್ರೀಲಂಕಾ ಎಂಬ ದ್ವೀಪರಾಷ್ಟ್ರ ಆರ್ಥಿಕವಾಗಿ ಅಧಃಪತನಕ್ಕೆ ಇಳಿದಿತ್ತು. ಆ ಸಮಯದಲ್ಲಿ ಶ್ರೀಲಂಕಾದ ಜವಾಬ್ದಾರಿ ಅಂದಿನ ಪ್ರಧಾನಿ ರಾನಿಲ್ ವಿಕ್ರಮಸಿಂಘ ಕೈಯಲ್ಲಿತ್ತು, 2022ರ ಮೇದಿಂದ ಜುಲೈವರೆಗೆ ಪ್ರಧಾನಿಯಾಗಿದ್ದ ಅವರು ಬಳಿಕ ಅದೇ ವರ್ಷ ಅಧ್ಯಕ್ಷರಾದರು. 2024ರ ಚುನಾವಣೆಯಲ್ಲೂ ಕೂಡ ಸ್ಪರ್ಧಿಸಿದ್ದರು. ಆದರೆ ಅವರಿಗೆ ಹೀನಾಯ ಸೋಲು ಉಂಟಾಗಿ, ಅಧ್ಯಕ್ಷ ಸ್ಥಾನಕ್ಕೆ ದಿಸ್ಸನಾಯಕೆ ಏರಿದ್ದಾರೆ. ಇದೀಗ ಭಾರತ ಭೇಟಿಯು ವಿಶೇಷತೆ ಪಡೆದುಕೊಂಡಿದೆ.