ಸಮಗ್ರ ನ್ಯೂಸ್ : ಡಿ.09 ರಂದು ರಾಜ್ಯದ ಮಹಿಳೆಯರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಮತ್ತೊಂದು ಗುಡ್ ನ್ಯೂಸ್ ನೀಡಲಿದ್ದಾರೆ. ಗೃಹ ಲಕ್ಷ್ಮಿ ಯೋಜನೆಯ ಮೂಲಕ ಈಗಾಗಲೇ ಪ್ರತಿ ಕುಟುಂಬದ ಮಹಿಳೆಗೆ 2000 ರೂಪಾಯಿ ನೀಡಲಾಗುತ್ತಿದ್ದು, ಇದೀಗ ಮುಂದಿನ ದಿನಗಳಲ್ಲಿ ಗೃಹಲಕ್ಷ್ಮೀ ಸಂಘಗಳನ್ನು ಸ್ಥಾಪಿಸಿ ಮಹಿಳೆಯರ ಸ್ವಾವಲಂಬನೆಗೆ ಮತ್ತೊಂದು ಹೆಜ್ಜೆ ಮುಂದಿಡುವ ಉದ್ದೇಶವನ್ನು ಹೊಂದಿದೆ.
ಹಿರೇ ಬಾಗೇವಾಡಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ (ರಿ) ವತಿಯಿಂದ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಹಾಗೂ ಸಾಮಾನ್ಯ ಸಹಾಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಕಳೆದ ಹಲವು ವರ್ಷಗಳಿಂದ ಅತ್ಯಂತ ಕ್ರಿಯಾಶೀಲ ಕೆಲಸಗಳ ಮೂಲಕ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸಲು, ಅವರಲ್ಲಿ ಅರ್ಥಿಕ ಬಲ ತುಂಬಲು ಪ್ರಯತ್ನಿಸುತ್ತಿರುವುದು ಅತ್ಯಂತ ಶ್ಲಾಘನೀಯ.
ಮಹಿಳೆ ಮೂಲತಃ ಸ್ವಾಭಿಮಾನಿ, ಯಾರ ಮುಂದೂ ಕೈ ಒಡ್ಡುವ ಸ್ವಭಾವ ಅವಳದಲ್ಲ. ತನ್ನ ಕಾಲ ಮೇಲೆ ತಾನು ನಿಲ್ಲಬೇಕು, ತಾನೂ ದುಡಿದು ಕುಟುಂಬದ ನೊಗ ಹೊರಬೇಕೆನ್ನುವ ತುಡಿತ ಪ್ರತಿಯೊಬ್ಬ ಮಹಿಳೆಯರಲ್ಲಿರುತ್ತದೆ. ನಮ್ಮ ಸರಕಾರ ಮಹಿಳೆಯರ ಸ್ವಾವಲಂಬನೆಗಾಗಿ, ಸ್ವಾಭಿಮಾನ ಕಾಪಾಡುವುದಕ್ಕಾಗಿ ಪಂಚ ಗ್ಯಾರಂಟಿ ಸೇರಿದಂತೆ ಹಲವಾರು ಯೋಜನೆಗಳನ್ನು ತಂದಿದೆ. ಮುಂದಿನ ದಿನಗಳಲ್ಲಿ ಗೃಹಲಕ್ಷ್ಮೀ ಸಂಘಗಳನ್ನು ಸ್ಥಾಪಿಸಿ ಮಹಿಳೆಯರ ಸ್ವಾವಲಂಬನೆಗೆ ಮತ್ತೊಂದು ಹೆಜ್ಜೆ ಮುಂದಿಡುವ ಉದ್ದೇಶವನ್ನು ನಾನು ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.ಗೃಹಲಕ್ಷ್ಮೀ ಯೋಜನೆಯಿಂದ ಬರುವ ಹಣವನ್ನು ಸೇರಿಸಿ ಸ್ವಯಂ ಉದ್ಯೋಗ ಶುರುಮಾಡಿ ಆರ್ಥಿಕವಾಗಿ ಸಬಲರಾಗಬೇಕು ಎಂಬುದೇ ನನ್ನ ಬಯಕೆ.
ಜೀವನ ಅಭಿವೃದ್ಧಿ ಆಗಬೇಕು, ಮಕ್ಕಳಿಗೆ ಶಿಕ್ಷಣ ಸಿಗಬೇಕು, ಎಲ್ಲರಿಗೂ ಆರೋಗ್ಯ ಸಿಗಬೇಕು ಎಂಬುದೇ ಗೃಹಲಕ್ಷ್ಮೀ ಯೋಜನೆಯ ಮೂಲ ಉದ್ದೇಶ ಎಂದು ತಿಳಿಸಿದರು.ಮಹಿಳೆಯರು ತಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು, ಆರ್ಥಿಕ ಸಬಲೀಕರಣದ ಜೊತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು, ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು, ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದರು. ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲೂ ಮುಂದೆ ಬರುತ್ತಿದ್ದಾಳೆ, ಎಲ್ಲಾ ಕ್ಷೇತ್ರಗಳಲ್ಲೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ, 25 ವರ್ಷದ ಹಿಂದೆ ಮಹಿಳೆಯನ್ನು ನೋಡುವ ದೃಷ್ಟಿ ಬೇರೆ ಇತ್ತು, ಇಂದು ಅದು ಬದಲಾಗಿದೆ. ಜಗತ್ತನ್ನೇ ಗೆಲ್ಲುವ ಛಲ ಮಹಿಳೆಗಿದೆ ಎಂದು ಹೇಳಿದರು.