ಸಮಗ್ರ ನ್ಯೂಸ್ : ಮನೆಯಲ್ಲಿ ನೇಣು ಬಿಗಿದುಕೊಂಡು ಎಎಸ್‌ಐ ಓರ್ವ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅನಂತಪೂರ ಗ್ರಾಮದಲ್ಲಿ ನಡೆದಿದೆ. ಸೂಸೈಡ್ ಮಾಡಿಕೊಂಡ ಎಎಸ್‌ಐ ಶಂಭು ಮೆತ್ರಿ (50) ಎಂದು ತಿಳಿದುಬಂದಿದೆ.
ಪೋಲಿಸ್ ಠಾಣೆಯಲ್ಲಿ ಎ.ಎಸ್.ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶಂಭು ಅವರು ಇಂದು ಅನಂತಪೂರ ಗ್ರಾಮದ ತಮ್ಮ ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ.ಅವರ ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುವುದು ಈವರೆಗೆ ತಿಳಿದುಬಂದಿಲ್ಲ. ಸಾವಿನ ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಅಥಣಿ ಪೋಲಿಸರು ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.
ಕಳೆದ ತಿಂಗಳಷ್ಟೇ ಬೆಳಗಾವಿ ತಹಶೀಲ್ದಾರ್ ಕೊಠಡಿಯಲ್ಲೇ SDA ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಇದೀಗ ASI ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿನ ಕುರಿತಾಗಿ ಹಲವು ಅನುಮಾನಗಳು ಮೂಡಿವೆ.