ಸಮಗ್ರ ನ್ಯೂಸ್: ನನ್ನ ಸಹೋದರನಿಗೆ ದೇಶಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ ಸಂಬಿತ್ ಪಾತ್ರ ಅವರ ಹೇಳಿಕೆ ಖಂಡಿಸಿ ತಿರುಗೇಟು ನೀಡಿದ್ದಾರೆ.
ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯನ್ನು ದೇಶದ್ರೋಹಿ ಎಂದು ಕರೆದಿದ್ದ ಸಂಬಿತ್ ಪಾತ್ರ ಅವರ ಹೇಳಿಕೆ ಖಂಡಿಸಿ ಮಾತನಾಡಿದ ಪ್ರಿಯಾಂಕಾ ಮಾಜಿ ಪ್ರಧಾನಿಗಳನ್ನು ದೇಶದ್ರೋಹಿಗಳು ಎಂದು ಕರೆದವರಿಂದ ಇಂತಹ ಆರೋಪ ಹೊಸದಲ್ಲ, ತನ್ನ ಸಹೋದರನಿಗೆ ದೇಶಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟದಲ್ಲಿ 13 ವರ್ಷ ಜೈಲು ವಾಸ ಅನುಭವಿಸಿದ ಜವಾಹರಲಾಲ್ ನೆಹರೂ ಅವರನ್ನು, ಪಾಕಿಸ್ತಾನವನ್ನು ಎರಡು ಭಾಗ ಮಾಡಿದ ಇಂದಿರಾಗಾಂಧಿ ಅವರನ್ನು, ಹುತಾತ್ಮರಾದ ರಾಜೀವ್ ಗಾಂಧಿ ಅವರನ್ನು ದೇಶದ್ರೋಹಿ ಎಂದು ಕರೆಯುವವರು ಇದೀಗ ರಾಹುಲ್ ಗಾಂಧಿಯೊಂದಿಗೆ ಅದೇ ರೀತಿ ಮಾಡುತ್ತಿದ್ದಾರೆ.
ಅದರಲ್ಲಿ ಹೊಸದೇನೂ ಇಲ್ಲ ಎಂದು ಪ್ರಿಯಾಂಕಾ ಸಂಸತ್ ಭವನದ ಹೊರಗೆ ಸುದ್ದಿಗಾರರಿಗೆ ತಿಳಿಸಿದ್ದಾರೆ.ಅದಾನಿ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ನನ್ನ ಸಹೋದರನ ಬಗ್ಗೆ ನನಗೆ ಹೆಮ್ಮೆ ಇದೆ, ನನ್ನ ಸಹೋದರನಿಗೆ ದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ” ಎಂದು ಹೇಳಿದರು.ಭಾರತ್ ಜೋಡೋ ಯಾತ್ರೆಯನ್ನು ಉಲ್ಲೇಖಿಸಿದ ಪ್ರಿಯಾಂಕಾ, ಈ ದೇಶದ ಏಕತೆಗಾಗಿ ತನ್ನ ಸಹೋದರ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 4,000 ಕಿಲೋಮೀಟರ್ ನಡೆದುಕೊಂಡು ಹೋಗಿದ್ದಾರೆ. ಅದಾನಿ ವಿಚಾರವನ್ನು ಸಂಸತ್ತಿನಲ್ಲಿ ಚರ್ಚಿಸಲು ಬಿಜೆಪಿಗೆ ಧೈರ್ಯವಿಲ್ಲ ಎಂದು ಆರೋಪಿಸಿದರು.