ಸಮಗ್ರ ನ್ಯೂಸ್: ಸಾಮಾನ್ಯವಾಗಿ ಕ್ರಿಕೆಟ್ ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳು ವಿಕೆಟ್ ಮುಂದೆ ನಿಂತು ಬ್ಯಾಟ್ ಬೀಸುತ್ತಾರೆ. ಆದರೆ ವೆಸ್ಟ್ ಇಂಡೀಸ್‌ನ ಮಾಜಿ ಆಲ್‌ರೌಂಡರ್ ಕೈರಾನ್ ಪೊಲ್ಲಾರ್ಡ್ ವಿಕೆಟ್‌ಗಳ ಹಿಂದೆ ಹೋಗಿ ಹೆಚ್ಚು ಬ್ಯಾಟಿಂಗ್ ಮಾಡಿದ್ದು ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ.ಈ ಘಟನೆ ಅಬುಧಾಬಿ ಟಿ10 ಟೂರ್ನಿಯಲ್ಲಿ ನಡೆದಿದೆ.
ಬುಧವಾರ (ನ.27) ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಯುಪಿ ನವಾಬ್ ಮತ್ತು ನ್ಯೂಯಾರ್ಕ್ ಸ್ಟೈಕರ್ಸ್ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಕೈರನ್ ಪೊಲ್ಲಾರ್ಡ್ ನೇತೃತ್ವದ ನ್ಯೂಯಾರ್ಕ್ ಸ್ಟೈಕರ್ಸ್ ಮೊದಲು ಬ್ಯಾಟ್ ಮಾಡಿತು. ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿತು. ಈ ಪಂದ್ಯದಲ್ಲಿ ಪೊಲ್ಲಾರ್ಡ್ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ವಿಫಲರಾದರು. ಅವರು 21 ಎಸೆತಗಳಲ್ಲಿ 12 ರನ್ ಗಳಿಸಿ ಅಜೇಯರಾಗಿ ಉಳಿದರು.
ಈ ಪಂದ್ಯದಲ್ಲಿ ಪೊಲ್ಲಾರ್ಡ್ ಬ್ಯಾಟಿಂಗ್‌ನಲ್ಲಿ ತೀವ್ರ ಸಂಕಷ್ಟ ಎದುರಿಸಿದರು. ಚೆಂಡನ್ನು ಬ್ಯಾಟ್‌ನಿಂದ ಸ್ಪರ್ಶಿಸಲೂ ತಡಕಾಡಿದರು. ಅವರಿಂದ ಒಂದೇ ಒಂದು ಬೌಂಡರಿ ಬಾರಿಸಲೂ ಸಾಧ್ಯವಾಗಲಿಲ್ಲ. ಒಂದು ಹಂತದಲ್ಲಿ ಪೊಲ್ಲಾರ್ಡ್ ವಿಚಿತ್ರವಾಗಿ ಬ್ಯಾಟಿಂಗ್ ಮಾಡಿದರು. ಬೌಲರ್ ಬೌಲಿಂಗ್ ಮಾಡುವ ಮುಂಚೆಯೇ ವಿಕೆಟ್ ಹಿಂದೆ ಹೋದರು. ಆದರೆ, ಬೌಲರ್ ಕೂಡ ಜಾಳ್ಮೆಯಿಂದ ಚೆಂಡನ್ನು ಆಪ್ ಸೈಡ್‌ನಲ್ಲಿ ವೈಡ್ ಬೌಲ್ ಮಾಡಿದರು. ಪೊಲಾರ್ಡ್ ಆ ಚೆಂಡನ್ನು ಬೌಂಡರಿಗೆ ಬಾರಿಸಲು ಯತ್ನಿಸಿದರು. ಆದರೆ, ವಿಫಲರಾದರು.
ಪೊಲ್ಲಾರ್ಡ್ ಅವರ ವಿಚಿತ್ರ ಬ್ಯಾಟಿಂಗ್ ಶೈಲಿಯ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಸರಿಯಾಗಿ ವಿಕೆಟ್ ಮುಂದೆ ಬ್ಯಾಟ್ ಮಾಡಿದ್ದರೆ ಖಂಡಿತ ಚೆಂಡು ಬೌಂಡರಿಗೆ ಹೋಗುತ್ತಿತ್ತು ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.ಅಂದಹಾಗೆ ಈ ಪಂದ್ಯದಲ್ಲಿ ಪೊಲ್ಲಾರ್ಡ್ ತಂಡ ಸೋಲುಂಡಿತು. 75 ರನ್‌ಗಳ ಗುರಿ ಬೆನ್ನತ್ತಿದ ಯುಪಿ ನವಾಬ್ 6.1 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಭಾಜ್ (21 ಎಸೆತಗಳಲ್ಲಿ 31 ರನ್) ಮತ್ತು ಆಂಡ್ರೆ ಫೆಚರ್ (6 ಎಸೆತಗಳಲ್ಲಿ 18 ರನ್) ಗಳಿಸಿ ಮಿಂಚಿದರು. (ಏಜೆನ್ಸಿಸ್)