Ad Widget .

ಹೇರ್ ಡ್ರೈಯರ್ ಸ್ಫೋಟ ಕೇಸ್; ಪ್ರೀತಿಗೆ ಅಡ್ಡಿಯಾದವಳನ್ನು ಮುಗಿಸಲು ಹೋದ, ಪ್ರೇಯಸಿಯ ಕೈಗಳೇ ತುಂಡಾದವು!

ಸಮಗ್ರನ್ಯೂಸ್: ಹೇರ್ ಡ್ರೈಯರ್ ಸ್ಫೋಟಗೊಂಡು ಮಹಿಳೆ ಕೈಗಳನ್ನು ಕಳೆದುಕೊಂಡಿದ್ದ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಪ್ರಕರಣದ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು. ಇದೀಗ ಘಟನೆಗೆ ಕಾರಣವೇನು ಎಂಬುವುದನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಪ್ರೀತಿಗೆ ಅಡ್ಡಿಯಾದವಳನ್ನು ಮುಗಿಸಲು ಹೋದ ವ್ಯಕ್ತಿಯ ಪ್ರೇಯಸಿ ಕೈಗಳೇ ತುಂಡಾಗಿರುವುದು ತನಿಖೆ ವೇಳೆ ಬಯಲಾಗಿದೆ.

Ad Widget . Ad Widget .

ತನಿಖೆಯಲ್ಲಿ ಸ್ಫೋಟದ ಹಿಂದೆ ಲವ್ ಸ್ಟೋರಿ ಮತ್ತು ಕೊಲೆಗೆ ಸ್ಕೆಚ್ ಇರುವುದು ಬಹಿರಂಗವಾಗಿದೆ. ಸಿದ್ದಪ್ಪ ಶೀಲವಂತ ಎಂಬಾತ ಮಹಿಳೆ ಕೊಲೆಗೆ ಸ್ಕೆಚ್ಚ ಹಾಕಿದ್ದ ಆರೋಪಿಯಾಗಿದ್ದಾನೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ನ. 15 ರಂದು ಹೇರ್ ಡ್ರೈಯರ್ ಬ್ಲಾಸ್ಟ್ ಆಗಿ, ಮೃತ ಯೋಧನ ಪತ್ನಿ ಬಸವರಾಜೇಶ್ವರಿ ಯರನಾಳ (35) ಅವರ ಎರಡು ಕೈಗಳು ಛಿದ್ರವಾಗಿದ್ದವು. ಕೇವಲ ಹೇರ್ ಡ್ರೈಯರ್ ಬ್ಲಾಸ್ಟ್‌ನಿಂದ ಇಷ್ಟೊಂದು ಭೀಕರ ಸ್ಫೋಟ ಹೇಗೆ ಸಾಧ್ಯ ಎಂಬ ಅನುಮಾನಗಳು ಮೂಡಿದ್ದವು.

Ad Widget . Ad Widget .

ಹೀಗಾಗಿ ತನಿಖೆಗೆ ಇಳಿದ ಇಳಕಲ್ ನಗರ ಠಾಣೆ ಪೊಲೀಸರಿಗೆ,ಸ್ಫೋಟದ ಹಿಂದೆ ಲವ್ ಸ್ಟೋರಿ ಇರುವುದು ಗೊತ್ತಾಗಿದೆ.ಪ್ರೀತಿಗೆ ಅಡ್ಡ ಬಂದವಳ ಮುಗಿಸಲು ಸ್ಕೆಚ್ ಗಾಯಾಳು ಬಸವರಾಜೇಶ್ವರಿ ಹಾಗೂ ಸಿದ್ದಪ್ಪ ಶೀಲವಂತ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಬಸವರಾಜೇಶ್ವರಿ ಸ್ನೇಹಿತೆ ಶಶಿಕಲಾ ಅಡ್ಡಿಯಾಗಿದ್ದಳು. ನೀನು ಮಾಡುತ್ತಿರುವುದು ಸರಿಯಲ್ಲ ಎಂದು ಸ್ನೇಹಿತೆ ಹೇಳಿದ್ದಕ್ಕೆ ಬಸವರಾಜೇಶ್ವರಿ, ಸಿದ್ದಪ್ಪ ಜತೆ ಮಾತನಾಡುವುದನ್ನು ಬಿಟ್ಟಿದ್ದಳು.
ಇದಕ್ಕೆಲ್ಲ ಕಾರಣ ಶಶಿಕಲಾಳನ್ನು ಮುಗಿಸೋಣ ಎಂದು ಪ್ಲಾನ್ ಮಾಡಿದ್ದ ಸಿದ್ದಪ್ಪ, ಗ್ರಾನೈಟ್ ಸ್ಫೋಟಕ್ಕೆ ಬಳಸುವ ಡೆಟೊನೇಟ‌ರ್ ಅನ್ನು ಹೇ‌ರ್ ಡ್ರೈಯರ್‌ನಲ್ಲಿ ಅಳವಡಿಸಿ ಶಶಿಕಲಾಗೆ ಕೊರಿಯರ್ ಮಾಡಿದ್ದ. ಆದರೆ ಅದನ್ನು ಆತನ ಪ್ರೇಯಸಿ ಬಸವರಾಜೇಶ್ವರಿಯೇ ತೆಗೆದುಕೊಂಡು, ನೋಡಿದ್ದರಿಂದ ಕೈಗಳನ್ನು ಕಳೆದುಕೊಂಡಿದ್ದಾರೆ.

ಸಿದ್ದಪ್ಪ ಎಂ.ಎ., ಬಿ.ಇಡಿ ಓದಿದ್ದು, ಬಸವರಾಜೇಶ್ವರಿ ಹಾಗೂ ಸಿದ್ದಪ್ಪ ಮದುವೆಗೂ ಮುನ್ನವೇ ಇಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ನಂತರ ಬಸವರಾಜೇಶ್ವರಿಗೆ ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಮದ ಯೋಧ ಪಾಪಣ್ಣ ಜತೆ ಮದುವೆ ನಡೆದಿತ್ತು. ಯೋಧ ಪಾಪಣ್ಣ 2017 ರಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ನಂತರ ಇವರಿಬ್ಬರ ಲವ್ ಮತ್ತಷ್ಟು ಗಟ್ಟಿಯಾಗಿತ್ತು.ಇಳಕಲ್ ನಗರದ ಬಸವನಗರದಲ್ಲಿ ಇಬ್ಬರು ಹೆಣ್ಣು ಮಕ್ಕಳ ಜೊತೆ ನೆಲೆಸಿದ್ದಳು. ಸಿದ್ದಪ್ಪ ಅಲ್ಲಿಗೆ ಬರುವುದು ಹೋಗೋದು ಮಾಡುತ್ತಿದ್ದ.

ಶಶಿಕಲಾ ಕೂಡ ಮೃತ ಯೋಧನ ಪತ್ನಿಯಾಗಿದ್ದಳು. ಇದು ಸರಿಯಲ್ಲ, ಆತನ ಸಹವಾಸ ಬಿಡು ಎಂದು ಬಸವರಾಜೇಶ್ವರಿಗೆ ಹೇಳುತ್ತಿದ್ದಳು. ಈ ಹಿನ್ನೆಲೆ ಕೆಲ ದಿನಗಳಿಂದ ಬಸವರಾಜೇಶ್ವರಿ, ಸಿದ್ದಪ್ಪನನ್ನು ಮನೆಗೆ ಬರಲು ಅವಕಾಶ ನೀಡಿರಲಿಲ್ಲ. ಸಿದ್ದಪ್ಪ ಗ್ರಾನೈಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಡೆಟೊನೇಟರ್ ಸ್ಪೋಟದ ಬಗ್ಗೆ ಮಾಹಿತಿಯಿತ್ತು. ಹೀಗಾಗಿ ಹೇ‌ರ್ ಡ್ರೈಯರ್‌ನಲ್ಲಿ ಸ್ಪೋಟಕ ಇಟ್ಟು, ನ.13ರಂದು ಕೊರಿಯರ್ ಮಾಡಿದ್ದ. ಹೇರ್ ಡ್ರೈಯರ್ ಶಶಿಕಲಾ ಪಡೆಯುತ್ತಾಳೆ, ಆಗ ಅದು ಬ್ಲಾಸ್ಟ್ ಆಗೋದು ಪಕ್ಕಾ ಎಂಬ ಲೆಕ್ಕಾಚಾರ ಸಿದ್ದಪ್ಪನದ್ದಾಗಿತ್ತು. ಆದರೆ, ಶಶಿಕಲಾ ಬದಲಾಗಿ ಬಸವರಾಜೇಶ್ವರಿ ಆ ಪಾರ್ಸೆಲ್ ಅನ್ನು ಪಡೆದಿದ್ದಾರೆ. ಹೀಗಾಗಿ ಹೇರ್ ಡ್ರೈಯರ್ ಸ್ಫೋಟವಾಗಿ, ಸಿದ್ದಪ್ಪ ಪ್ರೇಯಸಿಗೇ ಗಂಭೀರ ಗಾಯಗಳಾಗಿವೆ. ಕೊಲೆಗೆ ಸ್ಕೆಚ್ ಹಾಕಿದ್ದ ಆರೋಪಿಯ ಪ್ಲಾನ್ ಆತನಿಗೆ ಉಲ್ಟಾ ಹೊಡೆದಿದೆ ಎಂಬುವುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.

Leave a Comment

Your email address will not be published. Required fields are marked *