ಸಮಗ್ರ ನ್ಯೂಸ್: ಉಕ್ರೇನ್-ರಷ್ಯಾ ಸಂಘರ್ಷ ತೀವ್ರಗೊಂಡಿರುವುದು ಹಾಗೂ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವುದರ ಪರಿಣಾಮವೆಂಬಂತೆ, ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ದಾಖಲಿಸಿದೆ. ಗುರುವಾರ ರೂಪಾಯಿ ಮೌಲ್ಯ 8 ಪೈಸೆ ಕುಸಿದು, ದಿನದ ಅಂತ್ಯಕ್ಕೆ 84.50ಕ್ಕೆ ತಲುಪಿದೆ.
ಈ ಹಿಂದೆ ನ.14ರಂದು 84.46 ರೂ.ಗೆ ತಲುಪಿದ್ದೇ ದಾಖಲೆ ಆಗಿತ್ತು. ಇದೇ ವೇಳೆ, ಅದಾನಿ ಗ್ರೂಪ್ ವಿರುದ್ಧ ಲಂಚ ಮತ್ತು ಷೇರು ವಂಚನೆ ಆರೋಪ ಕೇಳಿಬರುತ್ತಿದ್ದಂತೆಯೇ, ಷೇರುಪೇಟೆಯಲ್ಲಿ ಸಂಚಲನ ಮೂಡಿದೆ. ಹೂಡಿಕೆದಾರರು ಏಕಾಏಕಿ ಷೇರುಗಳ ಮಾರಾಟದಲ್ಲಿ ತೊಡಗಿದ ಪರಿಣಾಮ ಗುರುವಾರ ಸೆನ್ಸೆಕ್ಸ್ 422 ಅಂಕ ಕುಸಿತ ದಾಖಲಿಸಿ, ದಿನಾಂತ್ಯಕ್ಕೆ 77,155ನ್ನು ತಲುಪಿದೆ.
ನಿಫ್ಟಿ ಕೂಡ 168 ಅಂಕ ಕುಸಿದು, 23,349ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಅದಾನಿ ಗ್ರೂಪ್‌ನ 10 ಕಂಪೆನಿಯ ಷೇರುಗಳು ಕೂಡ ಪತನಗೊಂಡಿದ್ದರ ಪರಿಣಾಮ, ಹೂಡಿಕೆ ದಾರರು ಭಾರೀ ನಷ್ಟ ಅನುಭವಿಸಿದ್ದಾರೆ.