ಸಮಗ್ರ ನ್ಯೂಸ್: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ತಾಡಿಪತ್ರಿಯಲ್ಲಿ ಮದುವೆಯಾಗಿ ಗಂಡನ ಮನೆಗೆ ಹೋಗಬೇಕಿದ್ದ ಅಚ್ಚುಮೆಚ್ಚಿನ ಮಗಳು, ನೇರ ಮಸಣ ಸೇರಿದ್ದ ಘಟನೆ ನಡೆದಿದೆ. ವೆಂಕಟರೆಡ್ಡಿಪಲ್ಲಿಯ ಶ್ರೀರಾಮಿರೆಡ್ಡಿ ಮತ್ತು ಲಕ್ಷ್ಮೀದೇವಿ ದಂಪತಿ, ಮಗಳು ಗೀತವಾಣಿ ಎಂದು ಗುರುತಿಸಲಾಗಿದೆ.
ತಮ್ಮ ಮೂವರು ಮಕ್ಕಳ ವಿದ್ಯಾಭ್ಯಾಸಕ್ಕೆ ಶ್ರಮಿಸಿದ ತಂದೆ ಶ್ರೀರಾಮಿರೆಡ್ಡಿ ಅವರ ಪುತ್ರಿಯರಾದ ಗೀತವಾಣಿ ಮತ್ತು ಬಿಂದು ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ ಬದುಕು ಕಟ್ಟಿಕೊಂಡರೆ, ಪುತ್ರ ಬಿ.ಟೆಕ್ ಮುಗಿಸಿ, ಆಗ ತಾನೇ ಕೆಲಸ ಹುಡುಕುತ್ತಿದ್ದ. ಈ ವೇಳೆ ಮಗಳು ಗೀತವಾಣಿ ಮದುವೆ ನಿಶ್ಚಯಿಸಿದ್ದ ಪೋಷಕರು, ಅಂದು ನಿಶ್ಚಿತಾರ್ಥಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು.
ನಿಶ್ಚತಾರ್ಥದ ಸಲುವಾಗಿ ತನಗೆ ಬೇಕಾದ ವಸ್ತುಗಳನ್ನು ಕುಟುಂಬಸ್ಥರು ತಂದುಕೊಡಲು ಮುಂದಾದರೂ ಸಹ ತಾನೇ ಹೋಗಬೇಕೆಂದು ಬಯಸಿದ ವಧು ಗೀತವಾಣಿ, ತನ್ನ ಕಿರಿಯ ಸಹೋದರ ನಾರಾಯಣ ರೆಡ್ಡಿ ಜತೆ ಬೈಕ್‌ನಲ್ಲಿ ತಾಡಿಪತ್ರಿಗೆ ತೆರಳಿದಳು. ಅಲ್ಲಿ ಎಂಗೇಜ್‌ಮೆಂಟ್‌ಗೆ ಬೇಕಿದ್ದ ವಸ್ತುಗಳನ್ನು ತೆಗೆದುಕೊಂಡು ರಾತ್ರಿ 8.30ರ ಸುಮಾರಿಗೆ ತಮ್ಮ ಊರಿಗೆ ವಾಪಾಸ್ ಆಗುವಾಗ ದಾರಿ ಮಧ್ಯೆ ರಸ್ತೆ ಅಪಘಾತದಿಂದ ಸಂಭವಿಸಿದೆ. ಕಲ್ಲುಗಳ ಲೋಡ್‌ನೊಂದಿಗೆ ತಾಡಿಪತ್ರಿಗೆ ಬರುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ವಧು ಸ್ಥಳದಲ್ಲೇ ಸಾವನ್ನಪ್ಪಿದರೆ, ಸಹೋದರ ರೆಡ್ಡಿಗೆ ಗಂಭೀರ ಗಾಯಗಳಾಗಿವೆ.
ಅಪಘಾತ ಸಂಭವಿಸಿದ ಬೆನ್ನಲ್ಲೇ ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ದಾಖಲಿಸುವುದರೊಳಗೆ ಗೀತವಾಣಿ ಪ್ರಾಣಪಕ್ಷಿ ಹಾರಿಹೋಗಿತ್ತು. ತೆಳ್ಳಾರಿನಲ್ಲಿ ನಡೆಯಬೇಕಿದ್ದ ನಿಶ್ಚಿತಾರ್ಥಕ್ಕೂ ಮುನ್ನವೇ ಯುವತಿ ಸಾವನ್ನಪ್ಪಿದ್ದು, ಮದುವೆ ಸಂತಸದಲ್ಲಿದ್ದ ಕುಟುಂಬಗಳಿಗೆ ಬರಸಿಡಿಲು ಬಡಿದಂತಾಗಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.