ಸಮಗ್ರ ನ್ಯೂಸ್: ಜಮೀನಿನ ವಿಚಾರಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಆಪ್ತನ ಮೇಲೆ ಸುಮಾರು 15ಕ್ಕೂ ಹೆಚ್ಚು ಜನ ತಲ್ವಾರ್ ನಿಂದ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ತಾಲೂಕಿನ ಯಳ್ಳೂರ ಬಳಿಯ ಸುಳಗಾ ಗ್ರಾಮದಲ್ಲಿ ನಡೆದಿದೆ.
ಸುಳಗಾ ಗ್ರಾಮದಲ್ಲಿ 20 ಗುಂಟೆ ಜಾಗಕ್ಕೆ ಮನೆಮುಂದೆ ಕುಳಿತಿದ್ದ ಅರವಿಂದ್ ಜೊತೆ ಕೆಲ ಯುವಕರು ವಾಗ್ವಾದ ನಡೆಸಿದ್ದಾರೆ.ಈ ವೇಳೆ ಮಾತಿಗೆ ಮಾತು ಬೆಳೆದ ಪರಿಣಾಮ ತಲ್ವಾರ್ ನಿಂದ ಏಕಾಏಕಿ ಹಲ್ಲೆ ನಡೆಸಿದ್ದಾರೆ.ಕೆಲ ದಿನಗಳ ಹಿಂದಷ್ಟೇ ಅರವಿಂದ ಪಾಟೀಲ ಪರ ಡಿಸಿ, ಎಸಿ ಕೋರ್ಟ್ ಆದೇಶ ನೀಡಿತ್ತು. ಎಸಿ ಕೋರ್ಟ್ ಆದೇಶವನ್ನು ತಡೆ ಕೋರಿ ಇನ್ನೊಂದು ಗುಂಪು ಕೋರ್ಟ್ ಮೆಟ್ಟಿಲೇರಿತ್ತು ಎಂದು ವರದಿಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಸಿ ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ಸಿಗದಿದ್ದಾಗ ಮಾರಕಾಸ್ತ್ರಗಳ ಮೂಲಕ ಬಂದು ಗಲಾಟೆ ಮಾಡುವ ಮೂಲಕ ಅರವಿಂದ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಸ್ಥಳೀಯರು ಓಡಿ ಬಂದಿದ್ದಾರೆ.ಇದನ್ನು ಗಮನಿಸಿದ ದುಷ್ಕರ್ಮಿಗಳು ಬೈಕ್ ಸ್ಥಳದಲ್ಲೇ ಬಿಟ್ಟು ಎಸ್ಕೆಪ್ ಆಗಿದ್ದಾರೆ. ಈ ದಾಳಿಯಲ್ಲಿ ಅರವಿಂದ್ ಜೊತೆಗೆ ಇಬ್ಬರೂ ದುಷ್ಕರ್ಮಿಗಳಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.