ಸಮಗ್ರ ನ್ಯೂಸ್: ದೇಶದಲ್ಲಿಯೇ ಕೊಡಗು ಜಿಲ್ಲೆಯಲ್ಲಿ ಪರಿಶುದ್ಧ ಗಾಳಿ ದೊರೆಯುವುದರಲ್ಲಿ ಅಗ್ರಸ್ಥಾನದಲ್ಲಿ ಇದೆ. ಕೇಂದ್ರ ಪರಿಸರ ಮಾಲಿನ್ಯ ಮಂಡಳಿಯು ಪರಿಶುದ್ಧ ಗಾಳಿ ಹೊಂದಿರುವ ಟಾಪ್ 10 ನಗರಗಳ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಅದರಲ್ಲಿ ಮಡಿಕೇರಿ ನಗರಕ್ಕೆ ಪ್ರಥಮ ಸ್ಥಾನ ದೊರೆತ್ತಿದ್ದರೆ ರಾಜ್ಯದ ಗದಗ 8 ನೇ ಸ್ಥಾನ ಪಡೆದಿದೆ.
ಕಳೆದ ವರ್ಷ ಕೇಂದ್ರ ಪರಿಸರ ಮಾಲಿನ್ಯ ಮಂಡಳಿ ಬಿಡುಗಡೆ ಮಾಡಿದ ಪಟ್ಟಿಗಳಲ್ಲಿ ಮಡಿಕೇರಿ 5ನೇ ಸ್ಥಾನ ಪಡೆದಿತ್ತು. ಆದರೆ ಈ ಬಾರಿ ದೇಶದಲ್ಲಿಯೇ ಅಗ್ರಸ್ಥಾನ ಪಡೆದಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. 2 ನೇ ಸ್ಥಾನವನ್ನು ಪಾಲ್ಕಲೈಪೆರೂರ್ ಪಡೆದುಕೊಂಡಿದ್ದರೆ, ಕ್ರಮವಾಗಿ ಕರೂರು, ತಿರುನೆಲ್ವೇಲಿ, ತಿರುಪತಿ, ಊಟಿ, ವೆಲ್ಲೂರ್, ರಾಣಿಪೇಟ್, ಗದಗ, ತೂತ್ಕುಡಿ ಹಾಗೂ ಪುದುಚೇರಿ ಕ್ರಮವಾದ ಸ್ಥಾನಗಳನ್ನು ಪಡೆದಿವೆ. ಮಡಿಕೇರಿಯಲ್ಲಿ ಗಾಳಿಯ ಮಾಲಿನ್ಯದ ಎಕ್ಯೂಐ ಸೂಚ್ಯಂಕದ ಪ್ರಕಾರ 10 ಆಗಿದ್ದರೆ ದೆಹಲಿಯಲ್ಲಿ ಎಕ್ಯೂಐ ಬರೋಬ್ಬರಿ 424 ರಷ್ಟು ದಾಖಲಾಗಿದೆ.
ಮಡಿಕೇರಿಯಲ್ಲಿ ಗಾಳಿಯಲ್ಲಿ ಇರುವ ಮಾಲಿನ್ಯ ಪ್ರಮಾಣ ಅಕ್ಟೋಬರ್ 2021 ರಿಂದ ಸೆಪ್ಟೆಂಬರ್ 2022 ರ ತನಕ 20.7 ರಷ್ಟಿತ್ತು. 2022 ರ ಅಕ್ಟೋಬರ್ ನಿಂದ 2023 ರ ಸೆಪ್ಟೆಂಬರ್ ಅವಧಿಯಲ್ಲಿ ಇದು 18.1 ಕ್ಕೆ ಇಳಿಕೆ ಆಗುವ ಮೂಲಕ ಶೇ 12.4 ರಷ್ಟು ಪ್ರಮಾಣದಲ್ಲಿ ಗಾಳಿಯ ಗುಣಮಟ್ಟದಲ್ಲಿ ಹೆಚ್ಚಳ ಕಂಡುಬಂದಿದೆ. ಕೇಂದ್ರ ಪರಿಸರ ಮಾಲಿನ್ಯ ಮಂಡಳಿ ಬಿಡುಗಡೆ ಮಾಡಿದ್ದ ಶುದ್ಧ ಗಾಳಿ ಹೊಂದಿರುವ ನಗರಗಳ ಪಟ್ಟಿಯಲ್ಲಿ ಮಿಜೋರಾಂನ ಐಜ್ವಾಲ್ ಪ್ರಥಮ ಸ್ಥಾನ ಪಡೆದಿತ್ತು. ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಟ್ಟಗುಡ್ಡಗಳಿದ್ದು, ಅವುಗಳೆಲ್ಲವೂ ಹಸಿರು ಕಾನನಗಳನ್ನು ಹೊದ್ದು ಮಲಗಿವೆ.
ಜೊತೆಗೆ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಖಾಸಗಿ ಆಸ್ತಿಗಳಲ್ಲಿದ್ದ ಅರಣ್ಯಗಳನ್ನು ಹೋಂಸ್ಟೇ, ರೆಸಾರ್ಟ್ ಸೇರಿದಂತೆ ಪ್ರವಾಸೋದ್ಯಮಕ್ಕೆ ಪೂರಕವಾಗಿ ಅಭಿವೃದ್ಧಿಗಾಗಿ ಕಡಿಯುತ್ತಿರುವುದರಿಂದ ಒಂದು ಅರಣ್ಯದ ಪ್ರಮಾಣದ ಕಡಿಮೆಯಾಗುತ್ತಿದೆ. ಆದರೂ ಜಿಲ್ಲೆಯಲ್ಲಿ ಅಷ್ಟು ದೊಡ್ಡ ಪ್ರಮಾಣದ ಕೈಗಾರಿಕೆಗಳು ಎಲ್ಲೂ ಇಲ್ಲ. ಜೊತೆಗೆ ವಾಹನಗಳ ಓಡಾಟವೂ ಕಡಿಮೆ ಇದೆ. ವಾಹನಗಳ ಓಡಾಟವಿದ್ದರೂ ಅವುಗಳಿಂದ ಬರುವ ಇಂಗಾಲದ ಡೈಯಾಕ್ಸೈಡ್ ಅವನ್ನು ಮರಗಿಡಗಳು ಹೀರಿಕೊಳ್ಳುವುದರಿಂದ ವಾಯು ಮಾಲಿನ್ಯವಾಗುತ್ತಿಲ್ಲ. ಹೀಗಾಗಿಯೇ ಇಲ್ಲಿನ ಗಾಳಿ ಶುದ್ಧವಾಗಿರುವುದಕ್ಕೆ ಪ್ರಮುಖ ಕಾರಣವಾಗಿದೆ.
ಹಿಂದಿನಿಂದಲೂ ಅಪಾರ ಪ್ರಮಾಣದ ಅರಣ್ಯ ಇರುವುದು ಶುದ್ಧ ಗಾಳಿ ಇರುವುದಕ್ಕೆ ಕಾರಣವಾಗಿದೆ. ಇತ್ತೀಚೆಗೆ ಪ್ರವಾಸೋದ್ಯಮದ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದಲ್ಲಿ ವಾಹನಗಳು ಜಿಲ್ಲೆಗೆ ಆಗಮಿಸುತಿದ್ದು ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ಜೊತೆಗೆ ಅಭಿವೃದ್ಧಿ ಹೆಸರಿನಲ್ಲಿ ಖಾಸಗಿ ಆಸ್ತಿಗಳಲ್ಲಿ ಇರುವ ಮರ ಗಿಡಗಳ ಕಡಿಯುವುದನ್ನು ತಡೆಗಟ್ಟಬೇಕಾಗಿದೆ. ಇಲ್ಲದಿದ್ದ ಮುಂದಿನ ದಿನಗಳಲ್ಲಿ ಕೊಡಗು ಕೂಡ ಮಾಲಿನ್ಯವಾಗುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನುತ್ತಾರೆ ಪರಿಸರ ಪ್ರೇಮಿಗಳು.