ಸಮಗ್ರ ನ್ಯೂಸ್: ಜಾರ್ಖಂಡ್ ವಿಧಾನಸಭೆ ಚುನಾವಣೆ ನಡೆಯುತ್ತಿರುವುದು ಗೊತ್ತೇ ಇದೆ. ಈಗಾಗಲೇ ಮೊದಲ ಹಂತದ ಮತದಾನ ನಡೆದಿದ್ದು, ಎರಡನೇ ಹಂತದ ಮತದಾನ ಬಾಕಿ ಇದೆ. ಹೀಗಾಗಿ ಚುನಾವಣಾ ಅಧಿಕಾರಿಗಳ ತಪಾಸಣೆ ಮುಂದುವರಿದಿದೆ. ಇದೇ ಸಮಯದಲ್ಲಿ ಕಾರಿನ ಸ್ಟೆಪ್ರಿಯಲ್ಲಿ ಬಚ್ಚಿಟ್ಟಿದ್ದ ಬರೋಬ್ಬರಿ 25 ಲಕ್ಷ ರೂ.ಹಣವನ್ನು ವಶಪಡಿಸಿಕೊಂಡಿರುವ ಘಟನೆ ಜಾರ್ಖಂಡ್-ಬಿಹಾರ ಗಡಿಯಲ್ಲಿರುವ ಬುದ್ವಾಡಿಹ್ (ಸನ್) ಚೆಕ್ ಪೋಸ್ಟ್‌ನಲ್ಲಿ ನಡೆದಿದೆ.
ನ.14 ರಂದು ವಾಹನ ತಪಾಸಣೆ ವೇಳೆ ಅಧಿಕಾರಿಗಳ ತಂಡ ಇಷ್ಟೊಂದು ಮೊತ್ತವನ್ನು ವಶಪಡಿಸಿಕೊಂಡಿದೆ. ಒಟ್ಟು 25 ಲಕ್ಷ ರೂಪಾಯಿ ಜೊತೆಗೆ ಒಂದು ಕಾರನ್ನು (ಸ್ವಿಫ್ಟ್ ಡಿಜೈರ್) ವಶಪಡಿಸಿಕೊಳ್ಳಲಾಗಿದೆ. ಎಲ್ಲ ಹಣವನ್ನು ಕಾರಿನ ಸ್ಟೆಪ್ಪಿಯಲ್ಲಿ ಬಚ್ಚಿಟ್ಟಿದ್ದರು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಯುವಕರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಗಿರಿದಿ ಜಿಲ್ಲೆಯ ಜಿಲ್ಲಾಧಿಕಾರಿ ನಮನ್ ಪ್ರಿಯೇಶ್ ಲಾಕ್ರಾ ಮತ್ತು ಎಸ್ಪಿ ಡಾ ವಿಮಲ್ ಕುಮಾರ್ ಅವರಿಗೆ ಪ್ರಕರಣದ ಸಂಪೂರ್ಣ ಮಾಹಿತಿ ನೀಡಲಾಗಿದೆ.
ಈ ಕುರಿತು ಡಿಯೋರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸೋನು ಕುಮಾರ್ ಸಾಹು ಮಾತನಾಡಿ, ಕಾರಿನಲ್ಲಿ ನೋಟುಗಳ ಬಂಡಲ್ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ರಹಸ್ಯ ಮಾಹಿತಿ ಲಭಿಸಿತು. ಕೂಡಲೇ ನಾವು ಸಕ್ರಿಯರಾದೆವು ಮತ್ತು ಬಿಹಾರ ಗಡಿಯಲ್ಲಿನ ಚೆಕ್‌ಪೋಸ್ಟ್ ಸಿಬ್ಬಂದಿ ಕೂಡ ಸಕ್ರಿಯರಾದರು. ಚೆಕ್‌ಪೋಸ್ಟ್‌ಗೆ ಬಂದ ಕಾರೊಂದನ್ನು ನಿಲ್ಲಿಸಿ ಕೂಲಂಕುಷವಾಗಿ ಪರಿಶೀಲಿಸಿದಾಗ ಹಣ ಪತ್ತೆಯಾಗಿದೆ ಎಂದರು. ಈ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೂ ತಿಳಿಸಲಾಗಿದೆ ಎಂದು
ಇನ್ಸ್‌ಪೆಕ್ಟರ್ ಸೋನು ಕುಮಾರ್ ಮಾಹಿತಿ ನೀಡಿದರು.