ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಡೇಗುಂದಿ ಗ್ರಾಮದ ಒಂಟಿ ಮನೆಗೆ ನಕ್ಸಲರು ಭೇಟಿ ನೀಡಿದ್ದಾರೆ ಎಂದು ವರದಿಯಾಗಿದ್ದು, ಗ್ರಾಮಕ್ಕೆ ನಕ್ಸಲ್ ನಿಗ್ರಹ ಪಡೆ ಅಧಿಕಾರಿಗಳು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಶೃಂಗೇರಿ ಹಾಗೂ ಕೊಪ್ಪ ಗಡಿ ಭಾಗದಲ್ಲಿರುವ ಕಡೇಗುಂದಿ ಗ್ರಾಮದ ಒಂಟಿ ಮನೆಯಲ್ಲಿರುವ ಸುಬ್ಬಗೌಡ ಎಂಬುವವರ ಮನೆಗೆ ನಕ್ಸಲ್ ಚಳುವಳಿಯ ಮುಂಡಗಾರು ಲತಾ, ಜಯಣ್ಣ ಸೇರಿದಂತೆ ಇನ್ನಿಬ್ಬರು ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ನಕ್ಸಲ್ ನಿಗ್ರಹ ಪಡೆ ದಾಳಿ ನಡೆಸಿದ್ದಾರೆ. ಅಧಿಕಾರಿಗಳು ದಾಳಿ ನಡೆಸುವ ವಿಷಯ ತಿಳಿಯುತ್ತಿದ್ದಂತೆ ನಾಲ್ವರು ಮನೆಯಿಂದ ಕಾಡಿನೊಳಗೆ ಪರಾರಿಯಾಗಿದ್ದಾರೆ.
ಬಳಿಕ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಮೂರು ಬಂದೂಕು, ಮದ್ದುಗುಂಡು ಸೇರಿದಂತೆ ಪ್ರಾಣಿಯ ಮಾಂಸಗಳು ಪತ್ತೆಯಾಗಿದೆ. ಈ ಮೂಲಕ ಲತಾ ಹಾಗೂ ಜಯಣ್ಣ ಬಂದಿರುವುದು ಖಚಿತವಾಗಿದೆ. ಸದ್ಯ ನಕ್ಸಲರಿಗೆ ಆಶ್ರಯ ನೀಡಿದ್ದ ಮೂವರನ್ನು ಅಧಿಕಾರಿಗಳು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಅಲ್ಲದೇ ಗ್ರಾಮದ ಸುತ್ತ ಮುತ್ತ ನಕ್ಸಲರಿಗಾಗಿ ತೀವ್ರ ಶೋಧಕಾರ್ಯ ನಡೆಸಲಾಗುತ್ತಿದ್ದು, ಆಶ್ರಯ ನೀಡಿದ ಸುಬ್ಬಗೌಡ ಹಾಗೂ ಮನೆಯವರ ವಿರುದ್ಧ ಜಯಪುರ ಪೊಲೀಸ್ ಠಾಣೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.