Ad Widget .

ಮೂಡಿಗೆರೆ: ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು| ವೈದ್ಯರ ನಿರ್ಲಕ್ಷ್ಯವೆಂದು ಆರೋಪಿಸಿ‌ ಸಾರ್ವಜನಿಕರಿಂದ ಪ್ರತಿಭಟನೆ

ಸಮಗ್ರ ನ್ಯೂಸ್: ರೋಗಿಯೊಬ್ಬರಿಗೆ ಮೂಡಿಗೆರೆ ಎಂಜಿಎಂ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ರೋಗಿಯೊಬ್ಬರು ಮೃತಪಟ್ಟಿದ್ದು, ಅವರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ ಪ್ರಸಂಗ ನಡೆದಿದೆ.

Ad Widget . Ad Widget .

ಚಿಕಿತ್ಸೆಗೆಂದು ಬಂದಿದ್ದ ಮೂಡಿಗೆರೆ ತಾಲ್ಲೂಕಿನ ಗುತ್ತಿ ಗ್ರಾಮದ ಸುಂದರೇಶ್ (31 ವ.) ಮೃತಪಟ್ಟಿದ್ದು,  ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ವಹಿಸಿದ ಪರಿಣಾಮವಾಗಿ  ಸುಂದರೇಶ್ ಮೃತಪಟ್ಟಿದ್ದಾರೆ ಎಂದು ಆಕ್ರೋಶಗೊಂಡ ಕುಟುಂಬಸ್ಥರು ಮತ್ತು ಸಾರ್ವಜನಿಕರು ಆಸ್ಪತ್ರೆ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.

Ad Widget . Ad Widget .

ಈ ಬಗ್ಗೆ ಮಾತನಾಡಿದ ಮೃತ ಸುಂದರೇಶ್ ಅವರ ಪತ್ನಿ ರೇಣುಕಾ , ನಮಗೆ 1 ಗಂಡು 1 ಹೆಣ್ಣು ಚಿಕ್ಕ ಮಕ್ಕಳಿದ್ದಾರೆ. ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದೆವು. ನನ್ನ ಪತಿಗೆ ಬೆಳಿಗ್ಗೆ 4 ಕ್ಕೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು, ಎದೆ ಭಾಗದಲ್ಲಿ ಉರಿ ಕಾಣಿಸಿಕೊಂಡು ಅಸ್ವಸ್ಥರಾದಾಗ ಅವರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದೇನೆ. ಆಸ್ಪತ್ರೆಯ ಒಳಗೆ ಹೋಗಲು ನನ್ನ ಪತಿಗೆ ಸಾಧ್ಯವಾಗಲಿಲ್ಲ. ವೀಲ್ ಚೇರ್ ತರಲು ಸಿಬ್ಬಂದಿ ಬಳಿ ಕೇಳಿಕೊಂಡಾಗ ಅವರು ವೀಲ್ ಚೇರ್ ತರಲಿಲ್ಲ. ಉಡಾಫೆಯಿಂದ ನನ್ನ ಪತಿಯ ಕುತ್ತಿಗೆ ಪಟ್ಟಿ ಹಿಡಿದು ಆಸ್ಪತ್ರೆಯ ಒಳ ಭಾಗಕ್ಕೆ ದೂಡಿದ್ದಾರೆ. ತುರ್ತು ಚಿಕಿತ್ಸಾ ವಿಭಾಗದಲ್ಲಿ ವೈದ್ಯರು ಇರಲಿಲ್ಲ. ದಾದಿಯೊಬ್ಬರು  4 ಮಾತ್ರೆಯನ್ನು ನೀಡಿ ಅದರಲ್ಲಿ ಒಂದನ್ನು ನನ್ನ ಪತಿಗೆ ಕುಡಿಸಿದ್ದಾರೆ. ಬೆಳಿಗ್ಗೆ 10 ಗಂಟೆಯವರೆಗೆ ವೈದ್ಯರಾಗಲಿ ಅಥವಾ ಸಿಬ್ಬಂದಿಗಳಾಗಲಿ ಯಾರೊಬ್ಬರೂ ನನ್ನ ಪತಿಯ ಬಳಿ ಸುಳಿಯಲಿಲ್ಲ. ಅಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿದೆ. ನನಗೂ ಆರೋಗ್ಯ ಸರಿಯಿಲ್ಲ. ನನ್ನನ್ನು ಮತ್ತು ನನ್ನ ಮಕ್ಕಳನ್ನು ಸಾಕಲು ಯಾರು ಇಲ್ಲದೆ ಬೀದಿಗೆ ಬಿದ್ದಿದ್ದೇವೆ ಎಂದು ನೊಂದು ನುಡಿದಿದ್ದಾರೆ.

ವಿಷಯ ತಿಳಿದು ಆಸ್ಪತ್ರೆ ಬಳಿ ಜಮಾಯಿಸಿದ ಗ್ರಾಮಸ್ಥರು ಮತ್ತು ಸಂಬಂಧಿಕರು  ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿದ ವೈದ್ಯಾಧಿಕಾರಿ ಮತ್ತು ಉಡಾಫೆಯಿಂದ ವರ್ತಿಸಿದ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಮೃತ ದೇಹವನ್ನು ತೆಗೆದುಕೊಂಡು ಹೋಗುವುದಿಲ್ಲವೆಂದು ಪಟ್ಟು ಹಿಡಿದಾಗ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಯಿತು.

ಪರಿಸ್ಥಿತಿ ವಿಕೋಪಕ್ಕೆ ಹೋಗುವ ಹಂತಕ್ಕೆ ತಲುಪಿದಾಗ, ಪೊಲೀಸರು ಹೆಚ್ಚುವರಿ ಸಿಬ್ಬಂದಿಗಳನ್ನು ಕರೆಸಿಕೊಂಡು ಆಸ್ಪತ್ರೆ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಿದರು. ತಹಸಿಲ್ದಾರ್ ರಾಜಶೇಖರ್ ಮೂರ್ತಿ ಆಸ್ಪತ್ರೆಗೆ ದಾವಿಸಿ ಮೃತನ ಕುಟುಂಬಸ್ಥರು ಮತ್ತು ಸಾರ್ವಜನಿಕರ ಮನವೊಲಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಈ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರೆ ವೈದ್ಯರ ಪರವಾಗಿ ಮರಣೋತ್ತರ ಪರೀಕ್ಷಾ ವರದಿ ಬರುವ ಸಾಧ್ಯತೆಯಿದೆ ಹಾಗಾಗಿ ಇಲ್ಲಿ ಮರಣೋತ್ತರ ಪರೀಕ್ಷೆ ನಡೆಸುವುದು ಬೇಡ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಬೇಕು. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ನಂತರ ಪ್ರತಿಭಟನಾಕಾರರನ್ನು ಆಸ್ಪತ್ರೆಯ ಸಭಾಂಗಣಕ್ಕೆ ಕರೆದೊಯ್ದ ತಹಸಿಲ್ದಾರ್ ರಾಜಶೇಖರ್ ಮೂರ್ತಿ ಅವರು, ರೋಗಿಗೆ ಚಿಕಿತ್ಸೆ ನೀಡಲು ನಿರ್ಲಕ್ಷ ತೋರಿದ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ಕೂಡಲೆ ಎಲ್ಲಾ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳ ಸಭೆ ನಡೆಸಿ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಲೋಪ ದೋಷವಾಗದಂತೆ ಕಟ್ಟೆಚ್ಚರ ವಹಿಸಬೇಕೆಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಪ್ರಿಯಾಂಕ ಅವರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಹಿರಿಯ ವೈದ್ಯರಾದ ಡಾ. ಅನಂತಪದ್ಮನಾಭ ಅವರು ಆಸ್ಪತ್ರೆಗೆ ದಾವಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಸಿದರು.

ಸಿಬ್ಬಂದಿಯೊಬ್ಬ ರೋಗಿಯನ್ನು ತಳ್ಳಿದ್ದು, ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದು, ಇವೆಲ್ಲವೂ ಆಸ್ಪತ್ರೆಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಪುಟೇಜ್ ಪರಿಶೀಲಿಸಿ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ತಹಸಿಲ್ದಾರ್ ರಾಜಶೇಖರ್ ಮೂರ್ತಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಯಿತು. ಪಿಎಸ್ಐ ಶ್ರೀನಾಥ್ ರೆಡ್ಡಿ ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿ ನಿಯಂತ್ರಣಕ್ಕೆ ತರುವಲ್ಲಿ ಶ್ರಮಿಸಿದರು.

ನಂತರ ಮೃತನ ಕುಟುಂಬಸ್ಥರು ನಮಗೆ ಮೃತ ದೇಹವನ್ನು ಬಿಟ್ಟು ಕೊಡಿ ಕೊಂಡೊಯ್ಯುತ್ತೇವೆ ಎಂದು ಕೇಳಿಕೊಂಡಾಗ, ಮರಣೋತ್ತರ ಪರೀಕ್ಷೆ ನಡೆಸಿದರೆ ಸಾವು ಸಂಭವಿಸಿರುವ ಬಗ್ಗೆ ಖಚಿತತೆ ತಿಳಿಯುತ್ತದೆ. ಅಲ್ಲದೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿವಾರವೂ ದೊರಕುತ್ತದೆ ಎಂದು ಮನವರಿಕೆ ಮಾಡಿದಾಗ ಮೃತನ ಪತ್ನಿ ರೇಣುಕಾ ಅವರು ಮರಣೋತ್ತರ ಪರೀಕ್ಷೆ ನಡೆಸುವುದು ಬೇಡ ಹಾಗೆಯೆ ಮೃತದೇಹವನ್ನು ಬಿಟ್ಟು ಕೊಡಿ ನಾವು ಕೊಂಡೊಯ್ಯುತ್ತೇವೆ ಎಂದಾಗ ಆಸ್ಪತ್ರೆಯ ಆಂಬುಲೆನ್ಸ್ ನಲ್ಲಿ ಮೃತ ದೇಹವನ್ನು ಕಳಿಸಿಕೊಡಲಾಯಿತು.

ನಂತರ ಆಸ್ಪತ್ರೆಗೆ ಧಾವಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ ಬಾಬು, ತಾಲೂಕು ಆರೋಗ್ಯಾಧಿಕಾರಿ ಡಾ.ಹರೀಶ್ ಬಾಬು ಆಸ್ಪತ್ರೆಯ ವೈದ್ಯಾಧಿಕಾರಿಗಳ ಸಭೆ ನಡೆಸಿ ರೋಗಿಗಳಿಗೆ ನೀಡುವ ಚಿಕಿತ್ಸೆಯಲ್ಲಿ ಲೋಪ ದೋಷವಾಗದಂತೆ ಕಟ್ಟೆಚ್ಚರ ವಹಿಸಬೇಕೆಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪಪಂ ಸದಸ್ಯ ಪಿ.ಜಿ.ಅನುಕುಮಾರ್, ಕೆಂಪೇಗೌಡ ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಬ್ರಿಜೇಶ್ ಕಡಿದಾಳು, ಸಂಜಯ್, ಚಂದ್ರು ಒಡೆಯಾರ್,  ಪರಮೇಶ್, ಕಿರಣ್, ಪಿ.ಕೆ.ಮಂಜುನಾಥ್, ಮಹೇಶ್ ಉದುಸೆ, ಯು.ಬಿ.ನಾಗೇಶ್, ಪ್ರಭಾಕರ್ ಬಿನ್ನಡಿ, ಬಕ್ಕಿ ರವಿ, ಶಿವಪ್ರಸಾದ್, ರುದ್ರಯ್ಯ ಪಾಪು, ಇತರರಿದ್ದರು.

ರೋಗಿಗೆ ಹೃದಯಾಘಾತವಾಗಿದ್ದು, ಅವರಿಗೆ ಸೂಕ್ತ ಸಮಯದಲ್ಲಿ ಕಾಳಜಿ ವಹಿಸಿ ಚಿಕಿತ್ಸೆ ನೀಡಿದ್ದರೆ ಅಥವಾ ಬೇರೆ ಆಸ್ಪತ್ರೆಗೆ ಸಕಾಲದಲ್ಲಿ ಕಳುಹಿಸಿಕೊಟ್ಟಿದ್ದರೆ ಬದುಕುಳಿಯುವ ಸಾಧ್ಯತೆ ಇತ್ತೆಂದು ಸಂಬಂಧಿಕರು ಅಳಲು ತೊಡಿಕೊಂಡಿದ್ದಾರೆ.

Leave a Comment

Your email address will not be published. Required fields are marked *