ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಮಹಿಳೆಯೊಬ್ಬರು ಹಾವು ಹಿಡಿಯುವ ವಿಡಿಯೋವೊಂದು ಭಾರೀ ವೈರಲ್ ಆಗಿತ್ತು. ಬೃಹತ್ ಗಾತ್ರದ ಹೆಬ್ಬಾವನ್ನು ಕೈಯಲ್ಲಿ ಹಿಡಿದುಕೊಂಡ ಮಹಿಳೆ ಅದನ್ನು ಗೋಣಿ ಚೀಲದಲ್ಲಿ ತುಂಬಿಸಲು ಅಲ್ಲಿ ನೆರೆದಿದ್ದವರ ನೆರವು ಯಾಚಿಸುವ ವಿಡಿಯೋ ಎಲ್ಲರನ್ನು ಹುಬ್ಬೇರುವಂತೆ ಮಾಡಿದೆ.
ಸಾಮಾನ್ಯವಾಗಿ ಮಹಿಳೆಯರು ಹಾವು ಕಂಡರೇ ಭಯದಿಂದ ಮಾರುದ್ದ ಓಡುತ್ತಾರೆ ಎನ್ನುವ ಭಾವನೆ ಜನ ಸಾಮಾನ್ಯರಲ್ಲಿ ಇದೆ. ಆದರೇ ಇದಕ್ಕೆ ಅಪವಾದ ಎಂಬಂತೆ ಮಹಿಳೆಯೊಬ್ಬರು ಯಾವುದೇ ಆಳುಕಿಲ್ಲದೇ ಹಾವನ್ನು ಹಿಡಿದಿರುವುದು ಹಾಗೂ ಅಕ್ಕ ಪಕ್ಕದಲ್ಲಿ ನಿಂತಿದ್ದ ಗಂಡಸರು ಆ ಹಾವಿನ ಹತ್ತಿರ ಹೋಗಲು ಹಿಂದೇಟು ಹಾಕುತ್ತಿದ್ದರು. ಹೆಬ್ಬಾವಿನ ಬಾಲವನ್ನು ಹಿಡಿದುಕೊಂಡಿದ್ದ ಮಹಿಳೆ ಯಾರಾದರೂ ಅದರ ತಲೆ ಭಾಗಕ್ಕೆ ಹೋಗಿ ಅದನ್ನು ಗೋಣಿಯಲ್ಲಿ ತುಂಬಿಸಿ ಎಂದು ಮನವಿ ಮಾಡಿದರೂ ಎಲ್ಲರೂ ಹೆದರಿ ದೂರ ನಿಂತಿದ್ದರು. ಕೊನೆಗೆ ಆಕೆ ಹಾವಿನ ಬಾಲದಲ್ಲಿ ನೀವು ಹಿಡಿಯಿರಿ ತಲೆಯನ್ನು ನಾನು ಹಿಡಿಯುತ್ತೇನೆ ಎಂದು ಸುತ್ತ ನೆರೆದವರಿಗೆ ಧೈರ್ಯ ತುಂಬುವ ಕಾರ್ಯವನ್ನು ಮಾಡಿದರು.
ಈ ವಿಡಿಯೋ ನೋಡಿದ ಎಲ್ಲರೂ ಮಹಿಳೆಯ ಧೈರ್ಯ ಸಾಹಸಕ್ಕೆ ಉಘೇ ಎಂದಿದ್ದಾರೆ. ನಿನ್ನೆ , ಮೊನ್ನೆ ಕರಾವಳಿ ಕರ್ನಾಟಕದಲ್ಲಿ ಧೂಳೆಬ್ಬಿಸಿದ್ದ ಆ ದಿಟ್ಟ ಮಹಿಳೆ ಯಾರು ಅನ್ನುವ ಕುತೂಹಲ ಎಲ್ಲರಲ್ಲಿಯೂ ಇತ್ತು . ಆದರೇ ಆ ವಿಡಿಯೋ ಜತೆ ಹಂಚಿಕೊಂಡ ಸಾಲುಗಳಲ್ಲಿ ಆಕೆಯ ಹೆಸರಿನ ಹೊರತಾಗಿ ಬೇರಾವುದೇ ಮಾಹಿತಿ ಇರಲಿಲ್ಲ. ಆದರೇ ಇದೀಗ ಈ ಮಹಿಳೆಯ ಮಾಹಿತಿ ಸಿಕ್ಕಿದ್ದು, ಈ ದಿಟ್ಟ ಮಹಿಳೆ ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿಯ ಶೋಭಾ ಯಾನೆ ಆಶಾ ಎಂದು ಗೊತ್ತಾಗಿದೆ. ಮೂಲತ: ಮಾಣಿಯವರಾದ ಈಕೆಯನ್ನು ವೇಣೂರಿನ ಅಂಡಿಂಜೆಯ ಎಂ ಪ್ರಶಾಂತ್ ಎಂಬವರಿಗೆ ವಿವಾಹ ಮಾಡಿ ಕೊಡಲಾಗಿದೆ. ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಅವರ ತಂದೆ ತಾಯಿ ಸದ್ಯ ಬೆಳ್ತಂಗಡಿಯ ಕುಪ್ಪೆಟ್ಟಿಯಲ್ಲಿ ನೆಲೆಸಿದ್ದಾರೆ.
ವೈರಲ್ ವಿಡಿಯೋದಲ್ಲಿರುವ ಘಟನೆ ನಡೆದಿರುವುದು ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ನೆಕ್ಕಿಲು ಜಾರಿಗೆದಡಿ ಎಂಬಲ್ಲಿ. ಅಲ್ಲಿನ ಬಾಬು ಮಾಸ್ಟರ್ ಎಂಬವರ ತೋಟದಲ್ಲಿ ನ .3ರಂದು ಸಂಜೆ ಬೃಹತ್ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡಿದೆ. ಇದರ ಮಾಹಿತಿ ಸಿಕ್ಕ ಶೋಭಾರವರು ಹೆಬ್ಬಾವನ್ನು ಯಾವುದೇ ಅಳುಕು ಅಂಜಿಕೆಯಿಲ್ಲದೇ ಹಿಡಿದು ಪಕ್ಕದ ಅರಣ್ಯಕ್ಕೆ ಬಿಟ್ಟಿದ್ದಾರೆ.
ಬಾಲ್ಯದಲ್ಲೇ ಹಾವುಗಳ ಬಗ್ಗೆ ಆಸಕ್ತಿ ಹೊಂದಿದ್ದ ಶೋಭಾರವರು ತನ್ನ ಸಣ್ಣ ಪ್ರಾಯದಲ್ಲೆ ಹಾವುಗಳನ್ನು ಹಿಡಿಯುವ ಖಯಾಲಿ ಹೊಂದಿದ್ದರು. ಆದರೇ ಹಾವುಗಳಲ್ಲಿ ಹೆಚ್ಚಿನವು ವಿಷಪೂರಿತವಾಗಿರುವುದರಿಂದ ಅದನ್ನು ಹಿಡಿಯದಂತೆ ಬುದ್ದಿ ಹೇಳಿದ್ದರು. ಆದರೇ 10 ವರ್ಷಗಳ ಹಿಂದೆ ಅವರ ವಿವಾಹವಾಗಿದ್ದು, ಬಳಿಕ ಪತಿಯ ಪ್ರೋತ್ಸಾಹ ಸಿಕ್ಕ ಕಾರಣ ಮತ್ತೆ ಹಾವು ಹಿಡಿಯಲು ಶುರು ಮಾಡಿದ್ದಾರೆ. . ಅವರು ಈವರೆಗೆ ಅಂದಾಜು 900 ಅಧಿಕ ಹಾವುಗಳ ರಕ್ಷಣೆ ಮಾಡಿದ್ದಾರೆ.
ಇವರ ಕಾರ್ಯವನ್ನು ಕಂಡ ಧರ್ಮಸ್ಥಳ ಗ್ರಾಮಾಭಿವೃದ್ದಿ ಒಕ್ಕೂಟದ ತಣ್ಣೀರುಪಂತ ಶೌರ್ಯ ವಿಪತ್ತು ನಿರ್ವಹಣಾ ಘಟಕದಲ್ಲಿ ಸೇರಿಸಿಕೊಳ್ಳಲಾಗಿದೆ. ಕಳೆದ ಐದು ವರ್ಷದಿಂದ ಅದರ ಸಂಯೋಜಕಿಯಾಗಿ ಅವರು ಕೆಲಸ ಮಾಡುತ್ತಿದ್ದಾರೆ.
ಕೃಪೆ: ನಿಖರ ನ್ಯೂಸ್