ಸಮಗ್ರ ನ್ಯೂಸ್: ಮಹಿಳೆಯೊಬ್ಬರು ಭಾರೀ ಗಾತ್ರದ ಹೆಬ್ಬಾವೊಂದನ್ನು ಹಿಡಿಯುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಪುತ್ತೂರು ತಾಲೂಕಿನ ಕೆಯ್ಯೂರು ಪರಿಸರದಲ್ಲಿ ಈ ಘಟನೆ ನಡೆದಿದ್ದು, ಶೋಬಾ ಎನ್ನುವ ಮಹಿಳೆ ಅತ್ಯಂತ ಚಾಣಾಕ್ಷ ರೀತಿಯಲ್ಲಿ ದೊಡ್ಡ ಗಾತ್ರದ ಹೆಬ್ಬಾವನ್ನು ಹಿಡಿದು ಸಾಗಿಸಿದ್ದಾರೆ. ರಸ್ತೆ ಬದಿಯಲ್ಲಿ ಈ ಹೆಬ್ಬಾವು ಕೋಳಿಯೊಂದನ್ನು ಹಿಡಿದು ತಿನ್ನುವುದನ್ನು ಗಮನಿಸಿದ ಸಾರ್ವಜನಿಕರು ಹೆಬ್ಬಾವಿನಿಂದ ಕೋಳಿಯನ್ನು ಹೆಬ್ಬಾವಿನಿಂದ ರಕ್ಷಿಸಲು ಹರಸಾಹಸ ಪಟ್ಟಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಶೋಭಾ ಹೆಬ್ಬಾವಿನ ಬಾಲವನ್ನು ಹಿಡಿದು ಎಳೆದು, ಹೆಬ್ಬಾವಿನ ಬಾಯಿಯಿಂದ ಕೋಳಿಯನ್ನು ರಕ್ಷಿಸಿದ್ದಾರೆ. ಸ್ಥಳದಲ್ಲಿ ಹತ್ತಾರು ಜನ ಉಪಸ್ಥಿತರಿದ್ದರೂ, ಹೆಬ್ಬಾವನ್ನು ಹಿಡಿಯಲು ಸಹಾಯ ಮಾಡುವಂತೆ ಮಹಿಳೆ ಕೆರೆದರೂ, ಯಾರೂ ಹೆಬ್ಬಾವಿನತ್ತ ಸುಳಿದಿಲ್ಲ.
ವಿಡಿಯೋದಲ್ಲಿ ಮಹಿಳೆ ಸ್ಥಳದಲ್ಲಿದ್ದ ಜನರೊಂದಿಗೆ ತುಳುವಿನಲ್ಲಿ ಸಂಭಾಷಣೆಯಲ್ಲಿ ಇದು ಹೆಬ್ಬಾವಲ್ಲ, ಕೋರಿ ಮರ್ಲ (ಕೋಳಿ ಹುಚ್ಚ) ಎನ್ನುತ್ತಿದ್ದಾರೆ. ಕೋಳಿಗಳನ್ನು ತಿನ್ನಲು ನಿರಂತರವಾಗಿ ಬರುವ ಹೆಬ್ಬಾವುಗಳನ್ನು ಹಳ್ಳಿಯ ಜನ ಕೋರಿ ಮರ್ಲೆ ಎಂದು ಸಂಭೋಧಿಸುತ್ತಿದ್ದು, ಅಸಲಿಗೆ ಇದನ್ನು ಇಂಡಿಯನ್ ರಾಕ್ ಪೈಥಾನ್ ಎಂದು ಕರೆಯಲಾಗುತ್ತದೆ. ಹೆಚ್ಚಾಗಿ ಕೋಳಿಗಳೇ ಇದರ ಟಾರ್ಗೆಟ್ ಆಗಿರುವ ಕಾರಣಕ್ಕಾಗಿಯೇ ಹಳ್ಳಿಗಳಲ್ಲಿ ಈ ಹೆಬ್ಬಾವುಗಳಿಗೆ ಕೋರಿಮರ್ಲ ಎಂದು ಕರೆಯಲಾಗುತ್ತದೆ.
ಸುತ್ತಮುತ್ತ ಜನರಿದ್ದರೂ ಹೆದರಿ ಹಾವಿನ ಹತ್ತಿರ ಬರಲು ಹಿಂದೇಟು ಹಾಕಿದ್ದಾರೆ. ಈ ವೇಳೆ ಶೋಭಾ ಒಬ್ಬರೇ ಹಾವಿನ ತಲೆ ಹಾಗು ಬಾಲವನ್ನು ಹಿಡಿದು ಗೋಣಿ ಚೀಲದ ಒಳಗೆ ತುಂಬಿಸಿದ್ದಾರೆ. ಯಾವುದೇ ಅನುಭವಿ ಉರಗತಜ್ಞರಿಗಿಂತಲೂ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಶೋಬಾ ದೊಡ್ಡ ಗಾತ್ರದ ಹಾವನ್ನು ಹಿಡಿದು ರಕ್ಷಿಸಿದ್ದು, ಮಹಿಳೆಯ ಈ ಎದೆಗಾರಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಯೂ ವ್ಯಕ್ತವಾಗಿದೆ.