ಸಮಗ್ರ ನ್ಯೂಸ್: ನಮ್ಮ ಸಂಸ್ಕೃತಿಯಲ್ಲಿ ಪ್ರತಿದಿನವೂ ಹಬ್ಬವೇ. ‘ಇಡಿಯ ಜೀವನವೇ ಹಬ್ಬ’ ಎಂಬ ಆಶಯ ಈ ಉಮೇದಿನಲ್ಲಿದೆ. ಹಬ್ಬಗಳ ಮೂಲದಲ್ಲಿರುವ ತಾತ್ವಿಕತೆ ನಮಗೆ ಅರ್ಥವಾದರೆ ಆಗ ನಮ್ಮ ಬದುಕಿನಲ್ಲೂ ಅರ್ಥವು ತುಂಬಿಕೊಂಡೀತು; ಮಾತ್ರವಲ್ಲ, ಹಬ್ಬಗಳ ಆಚರಣೆಗೂ ಸಾರ್ಥಕತೆ ಒದಗೀತು. ಹಬ್ಬಗಳ ಕಲ್ಪನೆ ಮತ್ತು ಕಲಾಪಗಳಲ್ಲಿ ನಮ್ಮ ನೆಲದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಕೇತಗಳು ಹರಡಿಕೊಂಡಿರುತ್ತವೆ; ಅವನ್ನು ಪುನಃ ಸಾಕ್ಷಾತ್ಕರಿಸಿಕೊಳ್ಳುವ ಸಂಭ್ರಮವೇ ಹಬ್ಬಗಳ ದಿಟವಾದ ಉದ್ದೇಶ.
ಹಬ್ಬಗಳು ಹೇಳಲು ಹೊರಟಿರುವುದೇ ಜೀವನದ ಅರ್ಥವಂತಿಕೆಯನ್ನು. ಆದರೆ ಸತ್ಯ, ಶಿವ, ಸುಂದರಗಳ ಸ್ವರೂಪವಾಗಿರುವ ಜೀವನಪಥವೇ ನಮ್ಮ ಇಂದಿನ ಮಂದಾಕ್ಷಿಗಳಿಗೆ ಕಾಣದಂತಾಗಿದೆ. ದೀಪಾವಳಿಯ ಒಂದೊಂದು ದಿನದ ಆಚರಣೆಯಲ್ಲೂ ಅಡಗಿರುವುದು ನಮ್ಮ ಜೀವನವನ್ನು ಸಾರ್ಥಕವಾಗಿಸುವ ಉಲ್ಲಾಸ-ಉತ್ಸಾಹಗಳು, ಆಚಾರ-ವಿಚಾರಗಳು.
ಸಾಮಾನ್ಯ ಅರ್ಥದಲ್ಲಿ ಕತ್ತಲು-ಬೆಳಕುಗಳನ್ನು ಪರಸ್ಪರ ವಿರೋಧಿ ಎಂದು ಸಮೀಕರಿಸುತ್ತೇವೆ. ಕತ್ತಲು ಎಂದರೆ ಸುಳ್ಳು, ದುಷ್ಟತನ, ದುಃಖ, ಭಯ, ಬಡತನ; ಬೆಳಕು ಎಂದರೆ ಸತ್ಯ, ಒಳ್ಳೆಯತನ, ಸುಖ, ಧೈರ್ಯ, ಸಿರಿತನ ಎಂಬ ವಿಂಗಡಣೆಗೂ ತೊಡಗುತ್ತೇವೆ. ಆದರೆ ಇಂಥ ವಿವರಗಳು ಸಾಪೇಕ್ಷ; ಯಾವುದು ಬೆಳಕು, ಯಾವುದು ಕತ್ತಲು – ಎಂದು ನಿರ್ಧರಿಸುವುದೂ ಅಷ್ಟು ಸುಲಭವಲ್ಲ. ನಮ್ಮ ಬದುಕಿನ ಬೆಳಕು-ಕತ್ತಲೆಗಳು ನಮ್ಮ ವಿವೇಕವನ್ನೇ ಅವಂಬಿಸಿರುತ್ತವೆ ಎಂಬ ಹೊಣೆಗಾರಿಕೆಗೆ ನಮ್ಮನ್ನು ಸಿದ್ಧಪಡಿಸುವುದೇ ದೀಪಾವಳಿಯ ಸಂದೇಶ.
ಕಾಮರೂಪ ಎಂಬ ದೇಶದಲ್ಲಿ ನರಕ ಎಂಬ ರಾಜನು ಆಳುತ್ತಿದ್ದನಂತೆ. ಇವನು ಹದಿನಾರು ಸಾವಿರ ಸುಂದರಿಯರನ್ನು ತನ್ನ ಸೆರೆಮನೆಯಲ್ಲಿ ಬಂಧಿಸಿದ್ದನಂತೆ. ಶ್ರೀಕೃಷ್ಣನು ಅವನನ್ನು ಸಂಹರಿಸಿ, ಅವರನ್ನು ಬಂಧಮುಕ್ತಗೊಳಿಸಿದ. ಈ ದಿನವೇ ನರಕಚತುರ್ದಶಿ.
‘ಕಾಮ’ ಎಂದರೆ ಬಯಕೆಗಳು. ನಾವು ‘ಕಾಮರೂಪ’ದಲ್ಲಿರುವ ‘ಕಾಮರೂಪಿ’ಗಳೇ ಆಗಿದ್ದೇವೆ. ನಾವು ಬಯಕೆಗಳನ್ನಷ್ಟೆ ನೆಚ್ಚಿಕೊಂಡರೆ ಆಗ ನಮ್ಮ ಬದುಕು ನರಕವಾಗುವುದು ಸಹಜವೇ. ನರರನ್ನು ಪೀಡಿಸುವುದೇ ನರಕ. ನರಕಾಸುರನು ಭೂದೇವಿಯ ಮಗನಂತೆ. ಭೂಮಿ ಎನ್ನುವುದು ಲೌಕಿಕ ಆಮಿಷಗಳನ್ನು ಪ್ರತಿನಿಧಿಸುತ್ತದೆ. ಸ್ವಾರ್ಥದ ಸೆಳೆತಗಳೇ ಅಲ್ಲವೆ ನಮ್ಮನ್ನು ಜೀವನದಲ್ಲಿ ಅಡ್ಡದಾರಿ ಹಿಡಿಯುವಂತೆ ಉತ್ತೇಜಿಸುವುದು? ಹೆಣ್ಣನ್ನು ಬಂಧಿಸಿ, ಅವಳನ್ನು ಬಲದ ನೆರವಿನಿಂದಲೂ, ಭಯದ ಬೆಂಬಲದಿಂದಲೂ ವಶಪಡಿಸಿಕೊಳ್ಳಲು ಹವಣಿಸುವುದು ಎಂದರೆ ನಮ್ಮ ಬಲವನ್ನು ದೌರ್ಜನ್ಯಕ್ಕೆ ಬಳಿಸಿಕೊಳ್ಳುವಂತೆ; ನಮ್ಮ ಬುದ್ಧಿಯನ್ನು ದುಷ್ಟತನಕ್ಕೆ ಒಪ್ಪಿಸಿದಂತೆ; ನಮ್ಮ ಜೀವನದ ಶಕ್ತಿ-ಸೌಂದರ್ಯಗಳನ್ನೇ ಭ್ರಷ್ಟಗೊಳಿಸಿಕೊಂಡಂತೆ. ಶ್ರೀಕೃಷ್ಣ ಅಂಥ ದುಷ್ಟತನಗಳ ‘ಪುರುಷಾಕಾರ’ವನ್ನು ಸಂಹರಿಸಿ, ನಮ್ಮ ಜೀವನದ ‘ಶಕ್ತಿ’ಗೆ ಸೊಗಸು, ಸಂತೋಷ, ಸ್ವಾತಂತ್ರ್ಯ, ಆಶ್ರಯ ಮತ್ತು ನೆಮ್ಮದಿಯ ಬೆಳಕನ್ನು ಕಾಣಿಸಿದ ಪರ್ವದಿನವೇ ನರಕಚತುರ್ದಶಿ.