ಸಮಗ್ರ ನ್ಯೂಸ್: ಕೇಂದ್ರ ಸರ್ಕಾರ ನಡೆಸುವ ಜನಗಣತಿಗೆ ಸಂಬಂಧಿಸಿದಂತೆ ಇದೀಗ ಪ್ರಮುಖ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಮುಂದಿನ ವರ್ಷದಿಂದ ದೇಶದಲ್ಲಿ ಜನಗಣತಿ ಆರಂಭವಾಗಬಹುದು ಎಂದು ಮೂಲಗಳು ತಿಳಿಸಿದ್ದು, ಜನಗಣತಿಯು ಮುಂದಿನ ವರ್ಷ 2025 ರಿಂದ 2026 ರವರೆಗೆ ನಡೆಯಲಿದೆ ಎನ್ನಲಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ 2021ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಅನಿವಾರ್ಯವಾಗಿ ಮುಂದೂಡಬೇಕಾಯಿತು.
ಇಲ್ಲಿಯವರೆಗೆ ಪ್ರತಿ ಹತ್ತು ವರ್ಷಗಳಿಗೊಮ್ಮೆ ದಶಕದ ಆರಂಭದಲ್ಲಿ ಜನಗಣತಿ ನಡೆಸಲಾಗುತ್ತಿತ್ತು.ಇನ್ನು ಮುಂದೆ 2025ರ ನಂತರ ಮುಂದಿನ ಜನಗಣತಿ 2035, 2045, 2055ರಲ್ಲಿ ಈ ರೀತಿ ನಡೆಯಲಿದೆ ಎಂದು ಮೂಲಗಳು ಹೇಳಿದೆ.ಜನಗಣತಿ ಮುಗಿದ ನಂತರ ಲೋಕಸಭಾ ಕ್ಷೇತ್ರಗಳ ಡಿಲಿಮಿಟೇಷನ್ ಆರಂಭವಾಗಲಿದೆ.
2028ರ ವೇಳೆಗೆ ಡಿಲಿಮಿಟೇಶನ್ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಹಲವು ವಿರೋಧ ಪಕ್ಷಗಳಿಂದ ಜಾತಿ ಗಣತಿ ನಡೆಸುವ ಬಗ್ಗೆ ಬೇಡಿಕೆಯೂ ಸಹ ಕೇಳಿ ಬಂದಿದೆ. ಆದರೆ ಜಾತಿ ಗಣತಿ ನಡೆಸುವ ಬಗ್ಗೆ ಕೇಂದ್ರ ಸರ್ಕಾರ ಇನ್ನೂ ನಿರ್ಧರಿಸಿಲ್ಲ ಎಂದು ತಿಳಿದು ಬಂದಿದೆ.ಜನಗಣತಿಯಲ್ಲಿ ಸಾಮಾನ್ಯವಾಗಿ ಧರ್ಮ ಮತ್ತು ವರ್ಗವನ್ನು ಕೇಳಲಾಗುತ್ತದೆ.
ಉದಾಹರಣೆಗೆ, ಕರ್ನಾಟಕದಲ್ಲಿ, ಸಾಮಾನ್ಯ ವರ್ಗಕ್ಕೆ ಸೇರಿದ ಲಿಂಗಾಯತರು ತಮ್ಮನ್ನು ಪ್ರತ್ಯೇಕ ಪಂಥವೆಂದು ಪರಿಗಣಿಸುತ್ತಾರೆ. ಇದು ಕೂಡ ಪರಿಗಣನೆಗೆ ಒಳಪಡುವ ಸಾಧ್ಯತೆ ಇದೆ.ಹಾಗೆಯೇ, ಪರಿಶಿಷ್ಟ ಜಾತಿಗಳಲ್ಲಿ ವಾಲ್ಮೀಕಿ, ರವಿದಾಸಿ ಮೊದಲಾದ ವಿವಿಧ ಪಂಗಡಗಳಿವೆ. ಅಂದರೆ ಧರ್ಮ, ವರ್ಗ ಹಾಗೂ ಪಂಗಡದ ಆಧಾರದ ಮೇಲೆ ಜನಗಣತಿ ಬೇಡಿಕೆಯನ್ನು ಸರ್ಕಾರ ಪರಿಗಣಿಸುತ್ತಿದೆ.