ಸಮಗ್ರ ನ್ಯೂಸ್: ದೀಪಾವಳಿ ಹಬ್ಬದ ಸಂದರ್ಭ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಯಶವಂತಪುರ – ಮಂಗಳೂರು ಜಂಕ್ಷನ್- ಯಶವಂತಪುರ ನಡುವೆ ವಿಶೇಷ ರೈಲು ಓಡಿಸಲು ನೈಋತ್ಯ ರೈಲ್ವೇ ನಿರ್ಧರಿಸಿದ್ದು, ಅ.30 ಮತ್ತು 31ರಂದು ಈ ರೈಲುಗಳು ಸಂಚರಿಸಲಿವೆ.
ನಂ.06565 ಯಶವಂತಪುರ-ಮಂಗಳೂರು ಜಂಕ್ಷನ್ ವಿಶೇಷ ರೈಲು ಅ.30ರಂದು ರಾತ್ರಿ 11.50ಕ್ಕೆ ಯಶವಂತಪುರದಿಂದ ಹೊರಡಲಿದ್ದು, ಅ.31ರಂದು ಮಧ್ಯಾಹ್ನ 11.45ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ನಂ.06566 ಮಂಗಳೂರು ಜಂಕ್ಷನ್ – ಯಶವಂತಪುರ ವಿಶೇಷ ರೈಲು ಅ.31ರಂದು ಮಧ್ಯಾಹ್ನ 1 ಗಂಟೆಗೆ ಮಂಗಳೂರು ಜಂಕ್ಷನ್‌ನಿಂದ ಹೊರಡಲಿದ್ದು, ರಾತ್ರಿ 9.45ಕ್ಕೆ ಬೆಂಗಳೂರು ತಲುಪಲಿದೆ.
ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ. ರೈಲು ಒಟ್ಟು 21 ಬೋಗಿ ಸಂಯೋಜನೆಯನ್ನು ಒಳಗೊಂಡಿದೆ.
ಕಳೆದ ವರ್ಷ ದಸರಾ, ದೀಪಾವಳಿ ಸಂದರ್ಭದಲ್ಲಿ ಮಂಗಳೂರು – ಬೆಂಗಳೂರು – ಮೈಸೂರು ನಡುವೆ ವಿಶೇಷ ರೈಲು ಓಡಾಟ ನಡೆಸಿತ್ತು. ಈ ಬಾರಿ ದಸರಾದಲ್ಲಿ ನಂ.06569 ಯಶವಂತಪುರ – ಕಾರವಾರ ವಿಶೇಷ ಎಕ್ಸ್‌ಪ್ರೆಸ್ ರೈಲು ಮತ್ತು ನಂ. 06570 ಕಾರವಾರ – ಮೈಸೂರು ವಿಶೇಷ ಎಕ್ಸ್‌ಪ್ರೆಸ್ ರೈಲು ವಯಾ ಪಡೀಲ್ ಮೂಲಕ ಸಂಚರಿಸಿದೆ. ಇದರಿಂದ ಮಂಗಳೂರಿಗೆ ಬರುವವರಿಗೆ ಹೆಚ್ಚಿನ ಲಾಭವಾಗಿಲ್ಲ. ದೀಪಾವಳಿಗಾದರೂ ಮಂಗಳೂರು – ಬೆಂಗಳೂರು ನಡುವೆ ಹೆಚ್ಚುವರಿ ರೈಲು ಓಡಲಿ ಎನ್ನುವುದು ರೈಲ್ವೇ ಹೋರಾಟಗಾರರ ಆಗ್ರಹವಾಗಿತ್ತು.