Ad Widget .

ಹವಾಮಾನ ಸಮಾಚಾರ| ಅ.19ರವರೆಗೂ ಭಾರೀ ಮಳೆ ಮುನ್ಸೂಚನೆ| ಸಮುದ್ರಕ್ಕೆ ಇಳಿಯದಂತೆ ದ.ಕ ಜಿಲ್ಲಾಡಳಿತದಿಂದ ಮೀನುಗಾರರಿಗೆ ಎಚ್ಚರಿಕೆ| ಬೆಂಗಳೂರಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಹಿನ್ನಲೆ ಅ.16ರಿಂದ 19ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾಡಳಿತ ‘ಮೀನುಗಾರರು ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳದಂತೆ ಸೂಚಿಸಿದೆ. ಜೊತೆಗೆ ಮೀನುಗಾರಿಕೆಗೆ ತೆರಳಿರುವ ಎಲ್ಲಾ ಮೀನುಗಾರರು ಕೂಡಲೇ ದಡ ಸೇರುವಂತೆ ತಿಳಿಸಿದೆ.

Ad Widget . Ad Widget .

ಇನ್ನು ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಭಾರಿ ಮಳೆ ಹಾಗೂ ಸಮುದ್ರ ಅಲೆಗಳ ಅಬ್ಬರ ಹೆಚ್ಚಾಗುವ ಸಾದ್ಯತೆ ಇರುವುದರಿಂದ ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿತೀರ, ಸಮುದ್ರ ತೀರಕ್ಕೆ ಸಾರ್ವಜನಿಕರು ಹಾಗೂ ಪ್ರವಾಸಿಗರು ತೆರಳದಂತೆ ಎಚ್ಚರಿಕೆ ವಹಿಸಲು ದ‌.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.

Ad Widget . Ad Widget .

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ದಿನವಿಡೀ ಮಳೆಯ ವಾತಾವರಣವಿತ್ತು. ಹಗಲು ವೇಳೆಯಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯಾಗಿದ್ದು, ಸಂಜೆ, ರಾತ್ರಿ ವೇಳೆಯಲ್ಲಿ ಹಲವೆಡೆ ಉತ್ತಮ ಮಳೆಯಾಗಿದೆ.

ಕರಾವಳಿಗೆ ಬುಧವಾರ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದ್ದು, ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ. ಸದ್ಯ ಗುರುವಾರ ಮತ್ತು ಶುಕ್ರವಾರ ಎಲ್ಲೋ ಅಲರ್ಟ್‌ ಇದೆ. ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 27.6 ಡಿ.ಸೆ. ದಾಖಲಾಗಿದ್ದು, ಮಳೆ ವಾತಾವರಣದಿಂದಾಗಿ ಸಾಮಾನ್ಯಕ್ಕಿಂತ 3.4 ಡಿ.ಸೆ. ಇಳಿಕೆಯಾಗಿದೆ. ಕನಿಷ್ಠ ತಾಪಮಾನ 23.6 ಡಿ.ಸೆ. ದಾಖಲಾಗಿದೆ.

ಬೆಂಗಳೂರು ನಗರ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ದಿನಾಂಕ 16.10.2024 ಮತ್ತು 17.10.2024 ರಂದು ಹವಾಮಾನ ಇಲಾಖೆಯು ನೀಡಿರುವ ಆರೆಂಜ್‍ ಅಲರ್ಟ್‍ ಮುನ್ಸೂಚನೆಯಂತೆ ಮಳೆಯ ತೀವ್ರತೆ ಹೆಚ್ಚಾಗುವುದರಿಂದ ಮುಂಜಾಗ್ರತೆ ಕ್ರಮವಾಗಿ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಿನಾಂಕ 16.10.2024 ರಂದು ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ, ಸರ್ಕಾರಿ ಹಾಗೂ ಖಾಸಗೀ / ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆಯನ್ನು ಘೋಷಿಸಿ ಬೆಂಗಳೂರು ನಗರ ಜಿಲ್ಲಾ ವಿಪತ್ತು ನಿರ್ವಾಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಗದೀಶ ಜಿ. ಆದೇಶಿಸಿದ್ದಾರೆ.

Leave a Comment

Your email address will not be published. Required fields are marked *