ಸಮಗ್ರ ನ್ಯೂಸ್: ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಮತ್ತು ವಿವಿಧ ಮಾನವೀಯ ಸೇವಾ ಕಾರ್ಯಗಳ ಮೂಲಕವಾಗಿ ಗುರುತಿಸಲ್ಪಡುತ್ತಿರುವ ಶಟರ್ ಬಾಕ್ಸ್ ಖ್ಯಾತಿಯ ಕಾಪುವಿನ ಸಚಿನ್ ಶೆಟ್ಟಿ ಮತ್ತು ಅಭಿಷೇಕ್ ಶೆಟ್ಟಿ ಅವರು ಕರಾವಳಿ ಪ್ರವಾಸೋದ್ಯಮ ಮತ್ತು ಧಾರ್ಮಿಕ ಪರಂಪರೆಯನ್ನು ಎಲ್ಲೆಡೆ ಪ್ರಚಾರ ಉದ್ದೇಶದೊಂದಿಗೆ ಸುಜುಕಿ ಜಿಮ್ನಿ ವಾಹನದಲ್ಲಿ ಈಶಾನ್ಯ ರಾಜ್ಯಗಳಿಗೆ 45 ದಿನಗಳ ಪ್ರವಾಸ ಹೊರಟಿದ್ದಾರೆ.
45 ದಿನಗಳ ಕಾಲ 17 ರಾಜ್ಯಗಳಲ್ಲಿ ಸುಮಾರು 14,000 ಕಿ.ಮೀ. ಸಂಚರಿಸ ಲಿರುವ ಇವರು ಕರ್ನಾಟಕ, ಆಂಧ್ರ ಪ್ರದೇಶ, ಒರಿಸ್ಸಾ, ಪಶ್ಚಿಮ ಬಂಗಾಲ, ಮೇಘಾಲಯ, ತ್ರಿಪುರ, ಮಿಝೋರಾಮ್, ಮಣಿಪುರ, ನಾಗಲ್ಯಾಂಡ್, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಗೋವಾ ಮಾರ್ಗವಾಗಿ ಮತ್ತು ಕರ್ನಾಟಕಕ್ಕೆ ಮರಳಲಿದ್ದಾರೆ.
ತಮ್ಮ ಪ್ರವಾಸದ ವೇಳೆ ಈಶಾನ್ಯ ರಾಜ್ಯಗಳೂ ಸೇರಿದಂತೆ ತಾವು ಸಂಚರಿಸುವ ಪ್ರದೇಶಗಳ ಜನರೊಂದಿಗಿನ ಮಾತುಕತೆ, ಅಧ್ಯಯನ ಮತ್ತು ಸಂಸ್ಕೃತಿಗಳ ಬಗ್ಗೆ ಅಲ್ಲಿಂದಲೇ ನೇರವಾಗಿ ಮಾಹಿತಿ ನೀಡಲಿದ್ದಾರೆ.
ಈಶಾನ್ಯ ರಾಜ್ಯಗಳ ಪ್ರವಾಸಕ್ಕಾಗಿ ತಮ್ಮ ಸುಜುಕಿ ಜಿಮ್ನಿ ವಾಹನವನ್ನು ವಿಶೇಷ ರೀತಿಯಲ್ಲಿ ಸಿದ್ಧಪಡಿಸಿದ್ದಾರೆ. ಈ ವಾಹನದಲ್ಲಿ ಪ್ರವಾಸದ ಸಮಯಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ವಿಶೇಷ ರೀತಿಯಲ್ಲಿ ಜೋಡಿಸಲಾಗಿದ್ದು, ವಿಶ್ರಾಂತಿಗಾಗಿ ವಾಹನದ ಮೇಲೆ ಟೆಂಟ್ ಅಳವಡಿಸಲಾಗಿದೆ. ಜೀಪ್‌ನ ಹಿಂಭಾಗದಲ್ಲಿ ಅಡುಗೆಗೆ ಬೇಕಾದ ವಸ್ತುಗಳು, ಅಡುಗೆ ಸಿದ್ಧಪಡಿಸುವ ವ್ಯವಸ್ಥೆಗಳನ್ನೂ ಜೋಡಿಸಲಾಗಿದೆ. ಆದಷ್ಟು ಖರ್ಚು ಕಡಿಮೆ ಮಾಡಿಕೊಂಡು, ಪ್ರವಾಸ ನಡೆಸುವ ಉದ್ದೇಶ ಹೊಂದಿದ್ದಾರೆ.