ಸಮಗ್ರ ನ್ಯೂಸ್: ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯಿಂದ ತೇಜಸ್ವಿ ಪ್ರತಿಷ್ಠಾನ, ತೇಜಸ್ವಿ ವಿಸ್ಮಯ ಲೋಕದ ಸ್ತಬ್ದಚಿತ್ರ ಪ್ರದರ್ಶನಗೊಳ್ಳಲಿದೆ.
ಚಿಕ್ಕಮಗಳೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ವತಿಯಿಂದ ಈ ಬಾರಿ ತೇಜಸ್ವಿ ಪ್ರತಿಷ್ಠಾನ, ತೇಜಸ್ವಿ ವಿಸ್ಮಯ ಲೋಕದ ಸ್ತಬ್ಧ ಚಿತ್ರವನ್ನು ಆಯ್ಕೆ ಮಾಡಲಾಗಿದೆ. ಕೊಟ್ಟಿಗೆಹಾರದ ತೇಜಸ್ವಿ ಪ್ರತಿಷ್ಠಾನದ ಕಟ್ಟಡ, ತೇಜಸ್ವಿ ಅವರ ಪ್ರತಿಮೆ, ಹಾರುವ ಓತಿ, ಪಶ್ಚಿಮ ಘಟ್ಟದಲ್ಲಿ ಕಾಣ ಸಿಗುವ ಕಪ್ಪೆ, ವಿವಿಧ ಬಗ್ಗೆ ಕೀಟಗಳು, ಹಕ್ಕಿಗಳು, ತೇಜಸ್ವಿ ಅವರ ಸಾಕುನಾಯಿ ಕಿವಿ, ಮೀನು ಶಿಕಾರಿ, ಪ್ರಕೃತಿ ಎಲ್ಲಾ ಅಂಶಗಳು ಇರಲಿದ್ದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಆಸಕ್ತಿಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಸ್ತಬ್ದಚಿತ್ರವನ್ನು ರೂಪಿಸಲಾಗಿದೆ. ಕಲಾವಿದ, ಚಿಕ್ಕಮಗಳೂರಿನ ಶಾಂತಿ ನಿಕೇತನಾ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯರು, ಹಾಗೂ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯರಾದ ವಿಶ್ವಕರ್ಮ ಆಚಾರ್ಯ ಅವರ ಕಲ್ಪನೆಯಲ್ಲಿ ಸ್ತಬ್ದಚಿತ್ರ ಮೂಡಿಬಂದಿದ್ದು ಜಂಬೂ ಸವಾರಿಯ ಮೆರವಣಿಗೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯನ್ನು ಪ್ರತಿನಿಧಿಸುವ ಸ್ತಬ್ದಚಿತ್ರ ತೇಜಸ್ವಿ ವಿಸ್ಮಯ ಲೋಕವನ್ನು ಅನಾವರಣಗೊಳಿಸಲಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ವಾಸವಾಗಿದ್ದ ಶ್ರೇಷ್ಠ ಲೇಖಕ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಪರಿಸರ ಸಂರಕ್ಷಣೆಯ ಮಹತ್ವವನ್ನು ತಮ್ಮ ಕೃತಿಗಳ ಮೂಲಕ ತಿಳಿಸಿದ್ದರು. ಸಾಹಿತ್ಯ ರಚನೆ, ಕೃಷಿ, ಮೀನು ಶಿಕಾರಿ, ಚಿತ್ರಕಲೆ, ಸಂಗೀತ, ಪೋಟೋಗ್ರಫಿ ಮುಂತಾದ ಕ್ಷೇತ್ರಗಳಲ್ಲಿ ಆಸಕ್ತಿಯನ್ನು ಹೊಂದಿದ್ದರು.
ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿರುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ತೇಜಸ್ವಿ ಅವರ ಬದುಕು, ಬರಹ, ಚಿಂತನೆಗಳ ಸಾಕಾರಕ್ಕಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದು ಕೀಟ ಸಂಗ್ರಹಾಲಯ, ವಸ್ತು ಸಂಗ್ರಹಾಲಯ, ಗಾಜಿನ ಓದಿನ ಮನೆ, ಪುಸ್ತಕ ಮಾರಾಟ ವಿಭಾಗ, ಆರ್ಕಿಡೇರಿಯಂ, ಚಿಟ್ಟೆ ಉದ್ಯಾನವನವನ್ನು ಪ್ರತಿಷ್ಠಾನದಲ್ಲಿ ನೋಡಬಹುದಾಗಿದೆ. ಚಾರಣ, ವಿಚಾರ ಸಂಕಿರಣ, ತೇಜಸ್ವಿ ಸಾಹಿತ್ಯ ಯಾನ, ತೇಜಸ್ವಿ ಓದು, ನಾಟಕ, ಸಂವಾದ, ಶಿಬಿರ ಮುಂತಾದ ಕಾರ್ಯಕ್ರಮದ ಮೂಲಕ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದೀಗ ತೇಜಸ್ವಿ ಪ್ರತಿಷ್ಠಾನ ಮತ್ತು ತೇಜಸ್ವಿ ವಿಸ್ಮಯ ಲೋಕ ಮೈಸೂರು ಜಂಬೂ ಸವಾರಿಯ ಸ್ತಬ್ದಚಿತ್ರದ ಮೂಲಕ ಅನಾವರಣಗೊಳ್ಳಲಿದ್ದು ತೇಜಸ್ವಿ ಅಭಿಮಾನಿಗಳು, ಓದುಗರಿಗೆ ಸಂತಸ ಉಂಟು ಮಾಡಿದೆ.