ಸಮಗ್ರ ನ್ಯೂಸ್: ಕೊಟ್ಟಿಗೆಹಾರ ಮೂಡಿಗೆರೆ ತಾಲ್ಲೂಕಿನ ಬಾಳೂರು ಠಾಣಾ ವ್ಯಾಪ್ತಿಯ ಬಿದಿರುತಳ ಎಂಬಲ್ಲಿ 2021 ರ ನವೆಂಬರ್ 27 ರಂದು ನಡೆದಿದ್ದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಕೊಲೆಯಾದ ನಾಗೇಶ್ ಆಚಾರ್ ಸಾಲ ವಾಪಸ್ಸು ಕೇಳಿದ್ದಕ್ಕೆ ಕಾರ್ಪೆಂಟರ್ ನಾಗೇಶ್ ಆಚಾರ್ ಎಂಬುವವರನ್ನು 2021 ರ ನ.27 ರಂದು ರಾತ್ರಿ ಮೂಡಿಗೆರೆ ತಾಲ್ಲೂಕ್ ಬಿದುರುತಳ ಅರಣ್ಯ ಪ್ರದೇಶದಲ್ಲಿ ಬಂದೂಕಿನಿಂದ ಗುಂಡು ಹಾರಿಸಿ, ಕೊಲೆ ಮಾಡಿ ಹೆಣ ಹೂತು ಹಾಕಿದ್ದ ಪ್ರಕರಣದಲ್ಲಿನ ಎರಡು ಜನ ಆರೋಪಿಗಳಿಗೆ ಘನ ನ್ಯಾಯಾಲಯವು ಶಿಕ್ಷೆ ಮತ್ತು ದಂಡ ವಿಧಿಸಿರುತ್ತದೆ.
ಪ್ರಕರಣದಲ್ಲಿನ 1ನೇ ಆರೋಪಿ ಬಾಳೂರು ಕೃಷ್ಣೇಗೌಡನಿಗೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ ದಂಡ ಮತ್ತು 2ನೇ ಆರೋಪಿ ಉದಯ ಬಿ. ಸಿ. ಗೆ 3 ವರ್ಷಗಳ ಕಠಿಣ ಶಿಕ್ಷೆ ಮತ್ತು ರೂ. 3 ಸಾವಿರ ದಂಡ ವಿಧಿಸಿ ಅ. 10ರಂದು ಘನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿಕ್ಕಮಗಳೂರು ತೀರ್ಪು ನೀಡಿರುತ್ತದೆ.
ಪ್ರಕರಣದ ತನಿಖೆಯನ್ನು ಮೂಡಿಗೆರೆಯ ಅಂದಿನ ಸರ್ಕಲ್ ಇನ್ಸ್ ಪೆಕ್ಟರ್ ಸೋಮಶೇಖರ್ ಜಿ.ಸಿ. ರವರು ನಡೆಸಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ತನಿಖಾ ಸಹಾಯಕರಾಗಿ ಸಿಪಿಸಿ ವೈಭವ್ ಮತ್ತು ಸಿಪಿಸಿ ಮನು ಹಾಗೂ ನ್ಯಾಯಾಲಯದ ಕರ್ತವ್ಯನ್ನು ಎಎಸ್ಐ ಯತೀಶ್ ರವರು ನಿರ್ವಹಿಸಿದ್ದರು. ಮೂಡಿಗೆರೆ ಹಾಲಿ ಸರ್ಕಲ್ ಇನ್ಸ್ ಪೆಕ್ಟರ್ ಸೋಮೇ ಗೌಡ ಅವರು ಪ್ರಕರಣದಲ್ಲಿ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಸರ್ಕಾರಿ ಅಭಿಯೋಜಕ ಹೆಚ್.ಎಸ್. ಲೋಹಿತಾಶ್ವಚಾರ್ ರವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
ಏನಿದು ಪ್ರಕರಣ ? ಕೊಲೆ ಮಾಡಿ ನಾಪತ್ತೆ ನಾಟಕ ಸೃಷ್ಟಿಸಿದ್ದ ಆರೋಪಿ.
ಮೂಡಿಗೆರೆ ತಾಲ್ಲೂಕು ಬಾಳೂರು ಮೀಸಲು ಅರಣ್ಯದ ಬಿದಿರುತಳ ಗ್ರಾಮದಲ್ಲಿ ಬಾಳೂರು ಗ್ರಾಮದ ನಾಗೇಶ್ ಆಚಾರ್(46 ವರ್ಷ) ಎಂಬುವವರು ನಿಗೂಢವಾಗಿ ನಾಪತ್ತೆಯಾಗಿದ್ದರು. ಬಾಳೂರು ಗ್ರಾಮದ ಕೃಷ್ಣೇಗೌಡ ಚಾರ್ಮಾಡಿ ಘಟ್ಟದ ತಪ್ಪಲಿನಲ್ಲಿರುವ ಬಿದಿರುತಳ ಗ್ರಾಮದಲ್ಲಿ ಹೋಂ ಸ್ಟೇ ಒಂದನ್ನು ಕಟ್ಟುತ್ತಿದ್ದ. ಈ ಹೋಂ ಸ್ಟೇನಲ್ಲಿ ಮರದ ಕೆಲಸವನ್ನು ನಾಗೇಶ್ ಆಚಾರ್ ಮಾಡುತ್ತಿದ್ದರು. ಅಂದು ಎಂದಿನಂತೆ ಕೃಷ್ಣೇಗೌಡ ತನ್ನ ಹೋಂ ಸ್ಟೇ ಕೆಲಸಕ್ಕೆಂದು ಬಾಳೂರಿನ ನಾಗೇಶ್ ಆಚಾರ್‍ರವರನ್ನು ಅವರ ಮನೆಯಿಂದ ಜೀಪಿನಲ್ಲಿ ಕರೆದುಕೊಂಡು ಹೋಗಿದ್ದ. ಎರಡು ದಿನಗಳ ನಂತರ ನಾಗೇಶ್ ಆಚಾರ್ ಮನೆಗೆ ಬಂದ ಕೃಷ್ಣೇಗೌಡ ಅವರ ಪತ್ನಿ ಬಳಿ ನಿಮ್ಮ ಗಂಡ ನಾಪತ್ತೆಯಾಗಿದ್ದಾನೆ.
ಮೀನು ಶಿಕಾರಿಗೆ ಎಂದು ಹೋದವನು ಮರಳಿ ಬಂದಿಲ್ಲ ಎಂದು ಕತೆ ಹೆಣೆದಿದ್ದಾನೆ. ಇದರಿಂದ ಗಾಬರಿಗೊಂಡು ನಾಗೇಶ್ ಆಚಾರ್ ಪತ್ನಿ ಸುಮ ಬಾಳೂರು ಠಾಣೆಯಲ್ಲಿ ಗಂಡ ನಾಪತ್ತೆಯಾಗಿದ್ದಾರೆಂದು ದೂರು ನೀಡಿದ್ದರು. ವಿಚಾರ ಎಲ್ಲೆಡೆ ಹಬ್ಬಿ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಮತ್ತು ನೂರಾರು ಗ್ರಾಮಸ್ಥರು ಹುಡುಕಾಟ ನಡೆಸುತ್ತಾರೆ. ಸ್ವತಃ ಕೃಷ್ಣೇಗೌಡನು ಸಹ ಹುಡುಕಾಟದಲ್ಲಿ ನಿರತನಾಗಿರುತ್ತಾನೆ. ಎರಡು ದಿನ ಹುಡುಕಾಡಿದರು ನಾಗೇಶ್ ಸುಳಿವು ಸಿಕ್ಕಿರಲಿಲ್ಲ. ಇನ್ನೇನು ಹುಡಕಾಟ ನಿಲ್ಲಿಸಿ ಮರಳಬೇಕು ಎನ್ನುವಷ್ಟರಲ್ಲಿ ವ್ಯಕ್ತಿಯೊಬ್ಬರಿಗೆ ಬಿದಿರುತಳ ಸಮೀಪ ಹಸಿಮಣ್ಣಿನಲ್ಲಿ ಕಂಡ ಹೆಜ್ಜೆ ಗುರುತು ಮತ್ತು ಮೂಗಿಗೆ ಬಡಿಯುತ್ತಿದ್ದ ವಾಸನೆ ಪ್ರಕರಣಕ್ಕೆ ತಿರುವು ನೀಡುತ್ತದೆ.
ಬಿದಿರುತಳದಿಂದ ಒಂದು ಕಿಲೋಮೀಟರ್ ದೂರದ ಕಡಿದಾದ ಸ್ಥಳದಲ್ಲಿ ಹೂಣಲ್ಪಟ್ಟಿದ್ದ ಅರೆಕೊಳೆತ ಸ್ಥೀತಿಯಲ್ಲಿದ್ದ ನಾಗೇಶ್ ಆಚಾರ್ ಶವ ಪತ್ತೆಯಾಗುತ್ತದೆ. ನಾಗೇಶ್ ಆಚಾರ್ ಪತ್ನಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಕೃಷ್ಣೇಗೌಡ ನನ್ನ ಪತಿಗೆ ಐದು ಲಕ್ಷ ಹಣ ಕೊಡಲು ಇತ್ತು. ಸಾಲ ಕೇಳಿದ್ದಕ್ಕಾಗಿ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದರು. ಇತ್ತ ನಾಪತ್ತೆಯ ನಾಟಕ ಸೃಷ್ಟಿಸಿ ಬಜಾವಾಗಲು ಪ್ಲಾನ್ ಮಾಡಿದ್ದ ಕೃಷ್ಣೇಗೌಡ ಮತ್ತು ಜೀಪ್ ಡ್ರೈವರ್ ಪ್ರದೀಪ್ ಮತ್ತು ಉದಯ ಇವರುಗಳನ್ನು ಪೊಲೀಸರು ಬಂಧಿಸಿದ್ದರು.
ಇದೀಗ ನ್ಯಾಯಾಲಯ ವಿಚಾರಣೆ ನಡೆಸಿ ಸಾಕ್ಷ್ಯಾಧಾರಗಳ ಮೇಲೆ ತೀರ್ಪು ಪ್ರಕಟಿಸಿದ್ದು, ಜೀಪ್ ಡ್ರೈವರ್ ಪ್ರದೀಪ್ ದೋಷ ಮುಕ್ತನಾಗಿದ್ದು, ಕೊಲೆ ಆರೋಪಿ ಕೃಷ್ಣೆಗೌಡ ಮತ್ತು ಹೆಣವನ್ನು ಹೂತು ಹಾಕಲು ಸಹಕರಿಸಿದ ಉದಯ ಇವರುಗಳನ್ನು ತಪ್ಪಿತಸ್ತರೆಂದು ತೀರ್ಮಾನಿಸಿ ಶಿಕ್ಷೆ ಪ್ರಕಟಿಸಿದೆ. ಬಾಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿ, ಸದಸ್ಯನಾಗಿ ಹಲವು ಬಾರಿ ಆಯ್ಕೆಯಾಗಿದ್ದ ಮತ್ತು ಕಾಂಗ್ರೇಸ್ ಪಕ್ಷದ ಮುಖಂಡನಾಗಿದ್ದ ಕೃಷ್ಣೇಗೌಡ ನಡೆಸಿದ್ದ ಈ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.