ಸಮಗ್ರನ್ಯೂಸ್: ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿರುವ ಈರುಳ್ಳಿ ದರ 80 ರೂಪಾಯಿ ಗಡಿ ದಾಟಿದೆ. ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬಂದರೂ ಬೆಲೆ ಏರುಗತಿಯಲ್ಲಿ ಸಾಗುತ್ತಿದ್ದು, ಮತ್ತಷ್ಟು ದರ ಹೆಚ್ಚಳ ಆತಂಕ ಎದುರಾಗಿದೆ.
ಮಹಾರಾಷ್ಟ್ರದಿಂದ 500ಕ್ಕೂ ಅಧಿಕ ಲಾರಿಗಳು ಸೇರಿ ಸುಮಾರು 980 ಲಾರಿಗಳು ಬೆಂಗಳೂರಿಗೆ ಬಂದಿವೆ. ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಗೆ 95,783, ದಾಸನಪುರ ಮಾರುಕಟ್ಟೆಗೆ 4427 ಚೀಲ ಈರುಳ್ಳಿ ಬಂದಿದೆ.
ಸಗಟು ಮಾರುಕಟ್ಟೆಯಲ್ಲಿ ಹಳೆ ಈರುಳ್ಳಿ ಕ್ವಿಂಟಲ್ ಗೆ 5200 ರೂ. ವರೆಗೆ ಗರಿಷ್ಠ ದರಕ್ಕೆ ಹರಾಜಾಗಿದೆ. ಉತ್ತಮ ಗುಣಮಟ್ಟದ ಹೊಸ ಈರುಳ್ಳಿ 4,000 ರೂ.ವರೆಗೂ ಮಾರಾಟವಾಗಿದೆ. ಮಳೆಯಿಂದ ಈರುಳ್ಳಿ ಬೆಳೆ ಹಾಳಾಗಿರುವುದರಿಂದ ಪೂರೈಕೆಯಲ್ಲಿ ವ್ಯಕ್ತಿಯವಾಗಿದ್ದು, ಈರುಳ್ಳಿ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಹೆಚ್ಚಿನ ಮಳೆ, ವಾತಾವರಣದಲ್ಲಿನ ಏರುಪೇರಿನಿಂದ ರಾಜಸ್ಥಾನ ಮತ್ತು ಗುಜರಾತ್‌ನಿಂದ ಮಾರುಕಟ್ಟೆಗೆ ಬರುತ್ತಿದ್ದ ಬೆಳ್ಳುಳ್ಳಿ ಪ್ರಮಾಣದಲ್ಲಿ ಕುಸಿತ ಉಂಟಾಗಿದೆ.
ಬೆಳ್ಳುಳ್ಳಿ ದರ ಏರುಗತಿಯಲ್ಲಿ ಸಾಗಿದ್ದು, 10 ದಿನಗಳಲ್ಲಿ ಪ್ರತಿ ಕೆ.ಜಿ.ಯ ಮೇಲೆ ₹100ರಷ್ಟು ಹೆಚ್ಚಳವಾಗಿದೆ. ಉತ್ತಮ ಗುಣಮಟ್ಟದ ಬೆಳ್ಳುಳ್ಳಿ ಕೆ.ಜಿ.ಯೊಂದಕ್ಕೆ ₹250 ಇದ್ದಿದ್ದು, ಪ್ರಸ್ತುತ ₹370ರಷ್ಟಾಗಿದೆ.
ಮೂರು ಮಾದರಿಯ ಬೆಳ್ಳುಳ್ಳಿ ಮಾರುಕಟ್ಟೆಗೆ ಬರುತ್ತದೆ. ಸಣ್ಣ ಗಾತ್ರದ ಬೆಳ್ಳುಳ್ಳಿಗೆ ಸಗಟು ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹200 ರಷ್ಟು ಇತ್ತು, ಇದರ ಬೆಲೆ ಈಗ ₹300ಕ್ಕೆ ತಲುಪಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಇನ್ನೂ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ.