ಸಮಗ್ರ ನ್ಯೂಸ್: ಪುನರ್ವಸತಿ ಕೇಂದ್ರದಿಂದ ಓಡಿ ಹೋಗಿದ್ದ ಇಬ್ಬರು ಬಾಲಕಿಯರ ಮೇಲೆ ಐವರು ಯುವಕರು ಅತ್ಯಾಚಾರ ಎಸಗಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಸೈದಾಬಾದ್ ಪೊಲೀಸರ ಪ್ರಕಾರ, ಖಾಸಗಿ ಸಂಸ್ಥೆಯೊಂದು ಐಎಸ್ ಸದನ್ ವಿಭಾಗದ ಅಡಿ ಬಾಲಕಿಯರ ಪುನರ್ವಸತಿ ಕೇಂದ್ರವನ್ನು ನಡೆಸುತ್ತಿದೆ. ಈ ಕೇಂದ್ರದಲ್ಲಿ 14 ವರ್ಷದ ಬಾಲಕಿ ಮೂರು ತಿಂಗಳಿನಿಂದ ಹಾಗೂ 15 ವರ್ಷದ ಬಾಲಕಿ ಸೆ.18ರಿಂದ ಆಶ್ರಯ ಪಡೆಯುತ್ತಿದ್ದರು. ಈ ಇಬ್ಬರೂ ಅಪ್ರಾಪ್ತರಿಗೆ ಪೋಷಕರಿದ್ದಾರೆ. ಆದರೆ ಬೇರೆ ಬೇರೆ ಕಾರಣಗಳಿಂದ ಪುನರ್ವಸತಿ ಕೇಂದ್ರಕ್ಕೆ ದಾಖಲಾಗಿದ್ದರು.
ಈ ಇಬ್ಬರು ಬಾಲಕಿರ ನಡುವೆ ಗೆಳತನ ಬೆಳೆದು ಕೇಂದ್ರದಿಂದ ಓಡಿಹೋಗಲು ಪ್ಲಾನ್ ಮಾಡಿದ್ದರು. ಅದರಂತೆ ಸೆಪ್ಟೆಂಬರ್ 24ರಂದು ಇಬ್ಬರು ಕಿಟಕಿಯಿಂದ ಹಾರಿ ಓಡಿ ಹೋಗಿದ್ದರು. ಈ ಬಗ್ಗೆ ಪುನರ್ವಸತಿ ಕೇಂದ್ರದ ಆಯೋಜಕರು ನೀಡಿದ ದೂರಿನ ಮೇರೆಗೆ ಸೈದಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಓಡಿ ಬಂದ ಇಬ್ಬರು ಬಾಲಕಿಯರು ರಾತ್ರಿ 8 ಗಂಟೆಗೆ ಬಸ್ ನಿಲ್ದಾಣದ ಬಳಿ ತಲುಪುತ್ತಾರೆ. ಓರ್ವ ಹುಡುಗಿ ಅಲ್ಲೇ ಇದ್ದ ಅಂಗಡಿಯೊಂದರ ಮ್ಯಾನೇಜರ್ನಿಂದ ಮೊಬೈಲ್ ತೆಗೆದುಕೊಂಡು ತನ್ನ ಪರಿಚಯಸ್ಥ ನಾಗರಾಜು ಎಂಬಾತನಿಗೆ ಕರೆ ಮಾಡಿದ್ದಾಳೆ. ಆದರೆ ಆತ ಈಕೆಯನ್ನು ರಕ್ಷಣೆ ಮಾಡುವ ಬದಲು ಆಶ್ರಯ ನೀಡುವುದಾಗಿ ತಿಳಿಸಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಇದೆ.
ಈ ವೇಳೆ ಮತ್ತೋರ್ವ ಬಾಲಕಿ ಬಸ್ ನಿಲ್ದಾಣದ ಬಳಿ ಒಂಟಿಯಾಗಿರುವುದನ್ನು ಕಂಡ ಮೊಬೈಲ್ ನೀಡಿದ ಅಂಗಡಿಯ ಸಾಯಿದೀಪ್ ಎಂಬಾತ ಹಾಗೂ ಮ್ಯಾನೇಜರ್ ರಾಜು ಸೇರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ಕಡೆ ಆರೋಪಿ ನಾಗರಾಜು ತಾನು ಅತ್ಯಾಚಾರವೆಸೆಗಿದ ಬಾಲಕಿಯನ್ನು ಸೆ. 25ರ ಬೆಳಗ್ಗೆ ಕರೆದುಕೊಂಡು ಬಂದು ಬಸ್ ನಿಲ್ದಾಣದ ಬಳಿ ಬಿಟ್ಟು ಹೋಗಿದ್ದಾನೆ. ಇದನ್ನು ಗಮನಿಸಿದ್ದ ಆರೋಪಿಗಳಾದ ಸಾಯಿದೀಪ್ ಮತ್ತು ರಾಜು ತಮ್ಮ ಇನ್ನಿಬ್ಬರು ಸ್ನೇಹಿತರಿಗೆ ವಿಷಯ ತಿಳಿಸಿ ಇಬ್ಬರೂ ಬಾಲಕಿಯರನ್ನು ಹೈದರಾಬಾದ್‌ಗೆ ಕರೆದೊಯ್ದು ಅತ್ಯಾಚಾರ ಮಾಡಿ ಬಸ್ ನಿಲ್ದಾಣದ ಬಳಿ ಬಿಟ್ಟಿದ್ದಾರೆ ಎನ್ನಲಾಗಿದೆ.
ಮೊದಲೇ ದೂರು ದಾಖಲಿಸಿದ್ದ ಪೊಲೀಸರು ಈ ಬಾಲಕಿಯರನ್ನು ಪತ್ತೆ ಹಚ್ಚಿ ಅದೇ ದಿನ ಸೈದಾಬಾದ್‌ಗೆ ಕರೆತಂದು ಪುನರ್ವಸತಿ ಕೇಂದ್ರಕ್ಕೆ ಒಪ್ಪಿಸಿದ್ದಾರೆ. ಕೇಂದ್ರದ ಸಂಘಟಕರು ಭರೋಸಾ ಕೇಂದ್ರದ ತಜ್ಞರನ್ನು ಕರೆಸಿ ಬಾಲಕಿಯರಿಗೆ ಕೌನ್ಸೆಲಿಂಗ್ ನಡೆಸಿದಾಗ ತಮ್ಮ ಮೇಲೆ ಅತ್ಯಾಚಾರ ನಡೆದಿದೆ ಎಂದು ಬಾಲಕಿಯರು ಹೇಳಿದ್ದಾರೆ. ಸದ್ಯ ಸೈದಾಬಾದ್ ಪೊಲೀಸರು ಐವರು ಯುವಕರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿ ರಿಮಾಂಡ್ಗೆ ಕಳುಹಿಸಿದ್ದಾರೆ.