Ad Widget .

ಅಬ್ಬರಿಸಿದ ಹಿಂಗಾರು ಮಳೆ| ವಿವಿಧೆಡೆ ಮಳೆ ಅವಘಡಕ್ಕೆ ಮೂವರು ಬಲಿ| 15 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ಕರಾವಳಿ ಸೇರಿ ರಾಜ್ಯದ ವಿವಿಧೆಡೆ ಭಾನುವಾರ ಗುಡುಗು, ಸಿಡಿಲು ಸಹಿತ ಧಾರಾಕಾರ ಹಿಂಗಾರು ಮಳೆ ಸುರಿದಿದ್ದು, ಮಳೆ ಸಂಬಂಧಿ ಅವಘಡಗಳಿಗೆ ಮೂವರು ಬಲಿಯಾಗಿದ್ದಾರೆ. ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಮುದ್ರಾಡಿ ಬಲ್ಲಾಡಿ ಗ್ರಾಮದಲ್ಲಿ ಮಳೆ ಸಂದರ್ಭ ಮನೆಯಿಂದ ಹೊರಬಂದ ಚಂದ್ರು ಗೌಡ್ತಿ (90) ಎಂಬುವರು ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.

Ad Widget . Ad Widget .

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ದಶಮಾಪುರದಲ್ಲಿ ಭಾನುವಾರ ಮಧ್ಯಾಹ್ನ ಸಿಡಿಲಿಗೆ ಇಬ್ಬರು ಬಲಿಯಾಗಿದ್ದಾರೆ. ಗ್ರಾಮದ ಬಣಕಾರ ನಾರಪ್ಪ (62) ಮತ್ತು ಬಣಕಾರ ಪ್ರಶಾಂತ (38) ಮೃತರು. ಜತೆಯಲ್ಲಿದ್ದ ಮಲ್ಲಿಕಾರ್ಜುನ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಈ ಮೂವರು ಹೊಲಗಳಲ್ಲಿ ಆಕಳು ಮೇಯಿಸಲು ಹೋಗಿದ್ದರು. ಮಳೆಬರುವ ಲಕ್ಷಣಗಳಿದ್ದರಿಂದ ಮರದ ಆಶ್ರಯ ಪಡೆದಿದ್ದರು. ಮರಕ್ಕೆ ಸಿಡಿಲು ಹೊಡೆದಿದ್ದರಿಂದ ಅದರ ಕೆಳಗೆ ಕುಳಿತಿದ್ದ ನಾರಪ್ಪ ಮತ್ತು ಪ್ರಶಾಂತ ಅಸುನೀಗಿದ್ದಾರೆ. ಹಾಸನ ಜಿಲ್ಲೆಯ ವಿವಿಧೆಡೆ ಮಳೆ ಮುಂದುವರಿದಿದ್ದು, ಸಕಲೇಶಪುರ, ಆಲೂರು, ಹಾಸನ ಸೇರಿ ಇತರ ಹಲವು ಕಡೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.

Ad Widget . Ad Widget .

ಹಲವು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆ ಮುಂದಿನ 3 ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರಿನಲ್ಲಿ ಅ.7ರಿಂದ ಅ.9ರವರೆಗೆ, ಬೆಂಗಳೂರು, ಬೆಂ.ಗ್ರಾಮಾಂತರ, ಮಂಡ್ಯ, ಚಾಮರಾಜನಗರ, ಬಳ್ಳಾರಿ, ದಾವಣಗೆರೆ, ಕೋಲಾರ, ತುಮಕೂರಿನಲ್ಲಿ ಅ.7 ಮತ್ತು ಅ.9ರಂದು ಗುಡುಗು, ಮಿಂಚು ಸಹಿತ ಭಾರಿ ಮಳೆ ಬೀಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ.

ಉದ್ಯಾನನಗರಿ ಬೆಂಗಳೂರಿನಲ್ಲಿ ಶನಿವಾರ ರಾತ್ರಿ ಒಂದೂವರೆ ಗಂಟೆ ಸುರಿದ ವರ್ಷಧಾರೆಗೆ ಜನರು ಬೆಚ್ಚಿಬಿದ್ದಿದ್ದು, ನಗರದ ಹಲವು ಕಡೆಗಳಲ್ಲಿ ಮಳೆ ಸಂಬಂಧಿಸಿದ ಅವಘಡಗಳು ಸೃಷ್ಟಿಯಾಗಿತ್ತು. ನೂರಾರು ಮನೆಗಳಿಗೆ ನೀರು ನುಗ್ಗಿದ್ದರೆ, ಅಪಾರ್ಟ್ ಮೆಂಟ್ ನಿವಾಸಿಗಳು ಜಲದಿಗ್ಬಂಧನಕ್ಕೆ ಒಳಗಾಗಿದ್ದರು. ಬೈಕ್,ಕಾರು ಜಖಂಗೊಂಡವು. ಅಂಡರ್​ಪಾಸ್, ಜಂಕ್ಷನ್ ಜಲಾವೃತಗೊಂಡಿದ್ದವು. ರಸ್ತೆಗಳು ಹೊಳೆಯಂತಾಗಿತ್ತು. 15 ಮರ, 44 ಮರದ ರೆಂಬೆ, ಕೊಂಬೆಗಳು ಧರೆಗುರುಳಿದಿದ್ದವು.

ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಮುಂದಿನ 3 ದಿನ ಸಾಧಾರಣ ಮಳೆಯಾಗಲಿದೆ. ಕೆಲ ಜಿಲ್ಲೆಗಳಲ್ಲಿ ಗಾಳಿ ವೇಗವೂ ಜಾಸ್ತಿ ಇರಲಿದೆ. ಹಿಂಗಾರು ಅವಧಿಯಲ್ಲಿ ಮಿಂಚು, ಗುಡುಗು ಜಾಸ್ತಿ ಇರಲಿದೆ. ಹಾಗಾಗಿ, ಮಳೆ ಬಂದಾಗ ಜಮೀನಿನಲ್ಲಿ ಕೆಲಸ ಮಾಡಬಾರದು ಎಂದು ಇಲಾಖೆ ಸಲಹೆ ನೀಡಿದೆ.

Leave a Comment

Your email address will not be published. Required fields are marked *