ಸಮಗ್ರ ನ್ಯೂಸ್: ಮುಡಾ ಸಂಕಷ್ಟಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸಿಲುಕಿದ ನಂತರದಲ್ಲಿ ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆಗಳು ಆಡಳಿತರೂಢ ಪಕ್ಷ ಹಾಗೂ ವಿಪಕ್ಷಗಳಲ್ಲೂ ನಡೆಯುತ್ತಲೇ ಬಂದಿದೆ. ಇನ್ನೊಂದು ವರ್ಷದಲ್ಲಿ ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಕೆಳಗಿಳಿದು, ರಾಜ್ಯಕ್ಕೆ ಹೊಸ ಸಿಎಂ ಆಯ್ಕೆ ಆಗಲಿದ್ದಾರೆ ಎಂಬ ಮಾತಿಗೆ ಇದೀಗ ಖುದ್ದು ಸಿದ್ದರಾಮಯ್ಯ ಅವರ ಹೇಳಿಕೆಗಳೇ ಪುಷ್ಠಿ ನೀಡಿವೆ.
ಸಿದ್ದರಾಮಯ್ಯ ಅವರು ದಸರಾ ಮಹೋತ್ಸವದ ವೇದಿಕೆಯಲ್ಲಿ ಭಾಷಣ ಮಾಡುವಾಗ, ಇನ್ನೊಂದು ವರ್ಷ ದೇವಿ ನನಗೆ ಅಧಿಕಾರ ನಡೆಸಲು ಆರ್ಶೀವಾದ ಮಾಡಲಿ. ಉತ್ತಮ ಕೆಲಸ ಮಾಡಲು ದೇವಿ ಇನ್ನೊಂದು ವರ್ಷವಾದರೂ ಆಶೀರ್ವದಿಸಲಿ. ಜನರ ಸೇವೆ ಮಾಡಲು ಆ ತಾಯಿ ಚಾಮುಂಡಿ ಶಕ್ತಿ ಕೊಡಲಿ ಎಂದು ಬೇಡಿಕೊಳ್ಳುವೆ ಎಂದಿದ್ದಾರೆ.
ಅಧಿಕಾರದ ಹಂಚಿಕೆ ಬಗ್ಗೆಯೇ ಸಿಎಂ ಈ ರೀತಿಯ ಮಾತುಗಳನ್ನು ಹೇಳಿದ್ದಾರೆ. ಹೀಗಾಗಿ ಇನ್ನೊಂದು ವರ್ಷ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಅವರು ಮುಂದುವರಿದರೆ ಎರಡೂವರೆ ವರ್ಷ ಪೂರೈಸಿದಂತಾಗುತ್ತದೆ. ಒಂದು ವರ್ಷದ ನಂತರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಚರ್ಚೆ, ಕುತೂಹಲ ಇದೀಗ ಸಿಎಂ ಭಾಷಣ ಮೂಡಿಸಿದೆ.