Ad Widget .

ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಗೆ ರಾಜ್ಯ ಸರ್ಕಾರ ಆದೇಶ

ಸಮಗ್ರ ನ್ಯೂಸ್: ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು ಗ್ರಾಮೀಣ ಪತ್ರಕರ್ತರಿಗೆ ವೃತ್ತಿಗೆ ಸಂಬಂಧಿ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ವಿತರಣೆಗೆ ಸರ್ಕಾರ ಆದೇಶಿಸಿದೆ.

Ad Widget . Ad Widget .

ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಡಿ 2024-25ನೇ ಸಾಲಿನ ಅಯವ್ಯಯ ಭಾಷಣದ ಕಂಡಿಕೆ 431ರಲ್ಲಿ “ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುವ ಅವಕಾಶ.

Ad Widget . Ad Widget .

ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ವಿದ್ಯುನ್ಮಾನ/ಮುದ್ರಣ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ಸೌಲಭ್ಯವನ್ನು ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ದಿನಾಂಕ:21/03/2024ರಲ್ಲಿದ್ದಂತೆ ಮಾಧ್ಯಮ ಪಟ್ಟಿಯಲ್ಲಿರುವ ಮುದ್ರಣ/ವಿದ್ಯುನ್ಮಾನ ಮಾಧ್ಯಮಗಳ ಸಂಖ್ಯೆಯನ್ನಾಧರಿಸಿ, ರಾಜ್ಯಾದ್ಯಂತ ಒಟ್ಟು 5222 ಪತ್ರಕರ್ತರಿಗೆ ಈ ಯೋಜನೆಯನ್ನು ಒದಗಿಸಲು, ಕೆ.ಎಸ್.ಆರ್.ಟಿ.ಸಿ ಸಂಸ್ಥೆಯು ನೀಡಿರುವ ಅಂದಾಜಿನಂತೆ, ಪ್ರತಿ ಪಾಸುದಾರರಿಗೆ ಪ್ರತಿ ತಿಂಗಳಿಗೆ ರೂ.2500/- ಗಳಾಗಬಹುದೆಂದು ವೆಚ್ಚವನ್ನು ಅಂದಾಜಿಸಿಲಾಗಿದೆ ಎಂದು ತಿಳಿಸಲಾಗಿದೆ. ಸದರಿ ಲೆಕ್ಕಚಾರದಂತೆ ಪ್ರತಿ ತಿಂಗಳಿಗೆ ರೂ. 1,30,55,000/- ಹಾಗೂ ವಾರ್ಷಿಕ ಅಂದಾಜು ಅನುದಾನ ರೂ.15,66,60,000/-ಗಳ ಅವಶ್ಯಕತೆ ಇರುತ್ತದೆ ಎಂದು ಅಂದಾಜಿಸಲಾಗಿದೆ ಎಂದಿದ್ದಾರೆ.

ಪತ್ರಿಕೆಗಳ ಸಂಖ್ಯೆ ಹಾಗೂ ವಿದ್ಯುನ್ಮಾನ ವಾಹಿನಿಗಳ ಸಂಖ್ಯೆ ಹೆಚ್ಚಾದಂತೆ ಪತ್ರಕರ್ತರ ಸಂಖ್ಯೆಯೂ ಸಹ ಹೆಚ್ಚಾಗುವುದರಿಂದ ಅಂದಾಜು ವೆಚ್ಚವೂ ಸಹ ಹೆಚ್ಚಾಗುವ ಸಾಧ್ಯತೆ ಇರುವುದಾಗಿ ತಿಳಿಸುತ್ತಾ, ಬೇಕಾಗುವ ಅನುದಾನದ ವಿವರಗಳ ಅಂದಾಜು ವೆಚ್ಚ ಹಾಗೂ ಸದರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಮಾರ್ಗಸೂಚಿಗಳನ್ನು ಒಳಗೊಂಡ ವಿವರವಾದ ಪಸ್ತಾವನೆಯನ್ನು ಸಲ್ಲಿಸಿ ಯೋಜನೆಯ ಅನುಷ್ಠಾನಕ್ಕೆ ಸರ್ಕಾರದ ಆದೇಶ ಹೊರಡಿಸುವಂತೆ ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರು, ಕೋರಿರುತ್ತಾರೆ ಎಂದು ಹೇಳಿದ್ದಾರೆ.

ಆರ್ಥಿಕ ಇಲಾಖೆಯು ಇದು ಮುಂದುವರೆದ ಮಾರ್ಪಾಡಿತ ಯೋಜನೆಯಾಗಿದ್ದು, ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ಅನುಷ್ಠಾನಗೊಳಿಸುವುದು ಎಂದು ಸೂಚಿಸಿರುತ್ತದೆ ಎಂದು ತಿಳಿಸಿದ್ದಾರೆ.

ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 2024-25ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ 431ರಲ್ಲಿನ ಘೋಷಣೆಯನ್ವಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ವಿದ್ಯುನ್ಮಾನ/ಮುದ್ರಣ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್‌ ಪಾಸ್ ಸೌಲಭ್ಯವನ್ನು ನೀಡುವ ಯೋಜನೆಯನ್ನು ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ಈ ಕೆಳಗಿನ ಮಾರ್ಗಸೂಚಿಗಳು ಹಾಗೂ ಷರತ್ತುಗಳನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಮಾರ್ಗಸೂಚಿಗಳು:

ಗ್ರಾಮೀಣ ಪತ್ರಕರ್ತರು ಬಸ್ ವಾಸ್ ಪಡೆಯುಲು ಈ ಕೆಳಕಂಡ ಷರತ್ತುಗಳನ್ನು ಪೂರೈಸಿರಬೇಕು.

ಅರ್ಜಿದಾರರು ಪ್ರತಿನಿಧಿಸುವ ಮಾಧ್ಯಮ ಸಂಸ್ಥೆಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ಇರಬೇಕು.

  • ಅರ್ಜಿದಾರರು ಪೂರ್ಣಾವಧಿಗೆ ನೇಮಕವಾಗಿದ್ದು ಕನಿಷ್ಟ ನಾಲ್ಕು, (4) ವರ್ಷಗಳಾಗಿರಬೇಕು. ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮ ಕ್ಷೇತ್ರದಲ್ಲಿ ಸೇವಾ ಅನುಭವ ಹೊಂದಿರಬೇಕು.
    ಪೂರ್ಣಾವಧಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಬಗ್ಗೆ, ನೇಮಕಾತಿ ಆದೇಶ, ವೇತನ ರಸೀತಿ/ಬ್ಯಾಂಕ್ ಸ್ನೇಟ್‌ಮೆಂಟ್ ಅಥವಾ ಸೇವಾನುಭವಕ್ಕೆ ಸಂಬಂಧಪಟ್ಟಂತೆ ಸೂಕ್ತ ದಾಖಲೆಗಳನ್ನು ಒದಗಿಸಬೇಕು.
    ಸಾಮಾನ್ಯ ಮನರಂಜನಾ ಹಾಗೂ ಇತರ ಪ್ರಕಾರಗಳ ವಾಹಿನಿಗಳ ಪ್ರತಿನಿಧಿಗಳಿಗೆ ಬಸ್‌ ಪಾಸ್‌ ಗಳನ್ನು ನೀಡಲಾಗುವುದಿಲ್ಲ.
    ಈ ಯೋಜನೆಯನ್ನು ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುವ ಕರ್ನಾಟಕ ಸಾರಿಗೆ ವ್ಯಾಪ್ತಿಯ (ಎಕ್ಸ್ ಪ್ರೆಸ್ ಸೇರಿದಂತೆ ಎಲ್ಲಾ ಬಸ್ಸುಗಳಲ್ಲಿ ಉಚಿತವಾಗಿ ಸಂಚರಿಸಲು ಸೀಮಿತಗೊಳಿಸಿದೆ.
    ಆಸಕ್ತ ಪತ್ರಕರ್ತರು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ, ಸಂಪಾದಕರ/ ಮುಖ್ಯಸ್ಮರ ಶಿಫಾರಸ್ಸಿನೊಂದಿಗೆ ಪೂರಕ ದಾಖಲೆಗಳೊಂದಿಗೆ ಅರ್ಜಿಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ತಮ್ಮ ಕಾರ್ಯ ವ್ಯಾಪ್ತಿಯ ಜಿಲ್ಲಾ ಮಟ್ಟದ ಉಪ ನಿರ್ದೇಶಕರು/ಹಿರಿಯ ಸಹಾಯಕ ನಿರ್ದೇಶಕರು/ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.
    ಜಿಲ್ಲಾ ಕೇಂದ್ರಗಳಿಂದ ಈ ಸೌಲಭ್ಯಕ್ಕೆ ಆಯ್ಕೆಯಾದ ಪತ್ರಕರ್ತರ ಪಟ್ಟಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕ್ರೋಢೀಕರಿಸಿ ಕೆ.ಎಸ್.ಆರ್.ಟಿ.ಸಿ ಸಂಸ್ಥೆಗೆ ನೀಡಲಾಗುವುದು. ಸದರಿ ಸಂಸ್ಥೆಯು ಮುದ್ರಿಸಿಕೊಡುವ ಬಸ್‌ಪಾಸ್ ಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಜಿಲ್ಲಾ ಪತ್ರಿಕಾ ಸಂಪಾದಕರಿಗೆ/ವರದಿಗಾರರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು.
    ಈ ಎಲ್ಲಾ ಪ್ರಕ್ರಿಯೆಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಜಂಟಿ ನಿರ್ದೇಶಕರು (ಸುಮಪ) ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಉಪ ಮುಖ್ಯ ಸಂಚಾರ ವ್ಯವಸ್ಥಾಪಕರು (ವಾಣಿಜ್ಯ) ಇವರುಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ
    ಜಿಲ್ಲಾ ಕೇಂದ್ರಗಳಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ವಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ, ಮಾಧ್ಯಮ ಮಾನ್ಯತಾ ಪತ್ರ ಪಡೆಯದ ಪತ್ರಕರ್ತರು, ಅವರು ಕಾರ್ಯನಿರ್ವಹಿಸುವ ಜಿಲ್ಲೆಯ ವ್ಯಾಪ್ತಿಯಲ್ಲಿ ಕರ್ನಾಟಕ ಸಾರಿಗೆ ವ್ಯಾಪ್ತಿಯ (ಎಕ್ಸ್ ಪ್ರೆಸ್ ಸೇರಿದಂತೆ ) ಬಸ್ ಗಳಲ್ಲಿ ಸಂಚರಿಸಲು ಬಸ್‌ ಪಾಸ್ ಅವಕಾಶ ಕಲ್ಪಿಸಿದೆ.
    ಅರ್ಜಿದಾರರು ತಹಸೀಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ ವನ್ನು ಸಲ್ಲಿಸುವುದು.
    ರಾಜ್ಯಮಟ್ಟದ ಪತ್ರಿಕೆಗಳು

ರಾಜ್ಯಮಟ್ಟದ ಪತ್ರಿಕೆಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ 15 ಪತ್ರಿಕೆಗಳಿದ್ದು (ಕನ್ನಡ ಮತ್ತು ಆಂಗ್ಲ ಸೇರಿ) ಜಿಲ್ಲೆಗಳಲ್ಲಿ ಸದರಿ ಪತ್ರಿಕೆಗಳ ಸಂಸ್ಥೆಯ ಮುಖ್ಯಸ್ಥರು ಸೂಚಿಸುವ ತಾಲ್ಲೂಕಿಗೆ ಓರ್ವ ವರದಿಗಾರರಂತ ಬಸ್ ಪಾಸ್ ನೀಡಲಾಗುವುದು.

ಜಿಲ್ಲಾ ಮಟ್ಟದ ಪತ್ರಿಕೆಗಳು

ಪತ್ರಿಕೆಗಳ ಸಂಪಾದಕರು ಮಾಧ್ಯಮ ಮಾನ್ಯತಾ ಪತ್ರ ಪಡೆದಿರದಿದ್ದರೆ ಸಂಪಾದಕರು ಅಥವಾ ಸಂಪಾದಕರು ಶಿಫಾರಸ್ಸು ಮಾಡುವ ಜಿಲ್ಲೆಯ ಓರ್ವ ವರದಿಗಾರರು.

ಪ್ರಾದೇಶಿಕ ಪತ್ರಿಕೆಗಳು

ಪ್ರಾದೇಶಿಕ ಪತ್ರಿಕೆಗಳ ವರದಿಗಾರರಿಗೆ, ಪತ್ರಿಕೆಯ ಪುಟಗಳ ಸಂಖ್ಯೆ ಆಧರಿಸಿ ಈ ಕೆಳಗಿನಂತೆ ಬಸ್‌ಪಾಸ್ ಗಳನ್ನು ನೀಡಲಾಗುವುದು.

ಆರು ಪುಟ : ಪತ್ರಿಕೆಯ ಸಂಪಾದಕರು ಶಿಫಾರಸ್ಸು ಮಾಡುವ ಒಬ್ಬ ವರದಿಗಾರರು ಹಾಗೂ ಒಬ್ಬ ಛಾಯಾಗ್ರಾಹಕರು
ಎಂಟು ಅಥವಾ ಹೆಚ್ಚು ಪುಟಗಳಿದ್ದರೆ ಸಂಪಾದಕರು ಶಿಫಾರಸ್ಸು ಮಾಡುವ ಇಬ್ಬರು ವರದಿಗಾರರು ಹಾಗೂ ಒಬ್ಬ ಛಾಯಾಗ್ರಾಹಕರು (ಒಂದು ವೇಳೆ ಛಾಯಾಗ್ರಾಹಕರು ಕಾರ್ಯ ನಿರ್ವಹಿಸತ್ತಿಲ್ಲವಾದಲ್ಲಿ ಸಂಪಾದಕರು ಶಿಫಾರಸ್ಸು ಮಾಡಿದ ಓರ್ವ ವರದಿಗಾರರಿಗೆ ನೀಡುವುದು)
ನಿಯತಕಾಲಿಕಗಳು:

ನಿಯತಕಾಲಿಕೆಗಳಿಗೆ ಬಸ್‌ಪಾಸ್‌ ನೀಡಲು ಅವಕಾಶವಿಲ್ಲ.
ವಿಶೇಷ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳು
ವಿಶೇಷ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಿಗೆ ಬಸ್‌ಪಾಸ್‌ ನೀಡಲು ಅವಕಾಶವಿಲ್ಲ.
ವಿದ್ಯುನ್ಮಾನ ಮಾಧ್ಯಮ:

ಮಾಧ್ಯಮ ಮಾನ್ಯತಾ ನಿಯಮಾವಳಿಗಳು-2009ರನ್ವಯ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪಗ್ರಹ ವಾಹಿನಿಗಳ ಒಬ್ಬ ವರದಿಗಾರ ಮತ್ತು ಒಬ್ಬ ಕ್ಯಾಮರಾಮನ್‌ಗೆ ಮಾಧ್ಯಮ ಮಾನ್ಯತಾ ಪತ್ರ ಹಾಗೂ ರಾಜ್ಯಾದ್ಯಂತ ಉಚಿತವಾಗಿ ಸಂಚರಿಸಲು ಬಸ್ ಪಾಸ್(ಸ್ಮಾರ್ಟ್ ಕಾರ್ಡ್) ನೀಡಲಾಗಿದೆ. ರಾಜ್ಯದ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ರಾಜ್ಯದ ಕಾರ್ಯ ಉಪಗ್ರಹ ವರದಿಗಾರರು/ಕ್ಯಾಮರಾಮನ್ ವಾಹಿನಿಗಳ ಪೂರ್ಣಾವಧಿ ನಿರ್ವಹಿಸುತ್ತಿರುವುದಿಲ್ಲ. ಅದಾಗಿಯೂ ತಾಲ್ಲೂಕು ಕೇಂದ್ರಗಳಲ್ಲಿ ಉಪಗ್ರಹ ವಾಹಿನಿಗಳ ವರದಿಗಾರರು ಮತ್ತು ಕ್ಯಾಮೆರಾಮ್ಯಾನ್ ಸೇವೆ ಸಲ್ಲಿಸುತ್ತಿದ್ದಲ್ಲಿ ಜಿಲ್ಲೆಗೆ ಓರ್ವ ವರದಿಗಾರ ಮತ್ತು ಓರ್ವ ಕ್ಯಾಮೆರಾಮ್ಯಾನ್‌ಗೆ (ವಾಹಿನಿಯ ಸಂಪಾದಕರು ಶಿಫಾರಸ್ಸಿನ ಅನ್ವಯ) ನೀಡಲಾಗುವುದು.
ಷರತ್ತುಗಳು:

ಬಸ್ ಪಾಸ್ ನ ಅವಧಿ 2 (ಎರಡು) ವರ್ಷ.
ಬಸ್ ಪಾಸ್ ಪಡೆದ ಪತ್ರಕರ್ತರು ಮಾಧ್ಯಮ ಸಂಸ್ಥೆ ತೊರೆದರೆ, ರಾಜೀನಾಮೆ ನೀಡಿದರೆ ಅಥವಾ ಮೃತಪಟ್ಟರೆ ಅವರು ಪಡೆದ ಈ ಬಸ್‌ಪಾಸ್ ಅನ್ನು/ದಾಖಲೆಗಳನ್ನು ಸೇವೆ ಸಲ್ಲಿಸುತ್ತಿರುವ ಸಂಸ್ಥೆ ಮೂಲಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಿಲ್ಲಾ ಕಚೇರಿಗೆ ಹಿಂತಿರುಗಿಸಬೇಕು. ತಪ್ಪಿದ್ದಲ್ಲಿ ಅವರ ಬದಲಿಗೆ ಸಂಸ್ಥೆಯ ಬೇರೊಬ್ಬರಿಗೆ ಬಸ್‌ಪಾಸ್‌ ನೀಡಲು ಅವಕಾಶವಿರುವುದಿಲ್ಲ.

ಬಸ್‌ಪಾಸ್‌ನ ಅವಧಿ ಪೂರ್ಣಗೊಂಡ ನಂತರ ಸಂಪಾದಕರ ಶಿಫಾರಸ್ಸಿನೊಂದಿಗೆ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಬೇಕು. ಈ ಸಂದರ್ಭದಲ್ಲಿ ಬಸ್‌ಪಾಸ್‌ಗೆ ನಿಗದಿಪಡಿಸಿದ ಅರ್ಹತಾ ಷರತ್ತುಗಳನ್ನು ಅರ್ಜಿದಾರರು ಹಾಗೂ ಅವರು ಪ್ರತಿನಿಧಿಸುವ ಮಾಧ್ಯಮ ಸಂಸ್ಥೆಯು ಪೂರ್ಣಗೊಳಿಸಿದ್ದರೆ ಮಾತ್ರ ಅಂತಹವರ ಬಸ್‌ಪಾಸ್‌ನ್ನು ನವೀಕರಿಸಲಾಗುವುದು.

ಈಗಾಗಲೇ ಮಾಧ್ಯಮ ಮಾನ್ಯತಾ ಪತ್ರ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಪಾಸ್‌ ಹೊಂದಿರುವ ಪತ್ರಕರ್ತರು ಈ ಸೌಲಭ್ಯಕ್ಕೆ ಅರ್ಹರಾಗುವುದಿಲ್ಲ.
ಪತ್ರಕರ್ತರ ಮಾಸಾಶನ ಪಡೆಯುವ ಪತ್ರಕರ್ತರು ಬಸ್‌ಪಾಸ್ ಪಡೆಯಲು ಅರ್ಹರಾಗಿರುವುದಿಲ್ಲ.

ಆಯ್ಕೆ ಸಮಿತಿ:

ಆಸಕ್ತ ಪತ್ರಕರ್ತರು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ, ಸಂಪಾದಕರ ಮುಖ್ಯಸ್ಥರ ಶಿಫಾರಸ್ಸಿನೊಂದಿಗೆ ಪೂರಕ ದಾಖಲೆಗಳೊಂದಿಗೆ ಅರ್ಜಿಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಿಲ್ಲಾ ಮಟ್ಟದ ಉಪ ನಿರ್ದೇಶಕರು/ಹಿರಿಯ ಸಹಾಯಕ ನಿರ್ದೇಶಕರು/ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು. ಜಿಲ್ಲಾ ವಾರ್ತಾಧಿಕಾರಿಗಳು ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಅಭ್ಯರ್ಥಿಗಳ ಅರ್ಜಿಗಳನ್ನು ಶಿಫಾರಸ್ಸಿನೊಂದಿಗೆ ನಿಗದಿಪಡಿಸಿದ ನಿಯಮಾನುಸಾರ ಕೇಂದ್ರ ಕಚೇರಿಗೆ ಕಳುಹಿಸಿಕೊಡುವುದು.

ಕೇಂದ್ರ ಕಚೇರಿಯ ಈ ಕೆಳಕಂಡ ಸದಸ್ಯರನ್ನೊಳಗೊಂಡ ಆಯ್ಕೆ ಸಮಿತಿಯು ಅರ್ಜಿಗಳನ್ನು ಪರಿಶೀಲಿಸಿ, ಬಸ್ ಪಾಸ್ ಮಂಜೂರು ಮಾಡಲು ಕ್ರಮ ವಹಿಸುವುದು.

  1. ಆಯುಕ್ತರು/ಇಲಾಖಾ ಮುಖ್ಯಸ್ಥರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,ಅಧ್ಯಕ್ಷರು
  2. ಜಂಟಿ ನಿರ್ದೇಶಕರು (ಸುದ್ದಿ ಮತ್ತು ಪತ್ರಿಕಾ ಶಾಖೆ)) ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, – ಸದಸ್ಯರು
  3. ಸರ್ಕಾರದಿಂದ ನಾಮ ನಿರ್ದೇಶಿತರಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಓರ್ವ ಪ್ರತಿನಿಧಿ – ಸದಸ್ಯರು.
  4. ಸರ್ಕಾರದಿಂದ ನಾಮ ನಿರ್ದೇಶಿತರಾದ ಬೆಂಗಳೂರು ವರದಿಗಾರ ಕೂಟದ ಓರ್ವ ಪ್ರತಿನಿಧಿ – ಸದಸ್ಯರು
  5. ಸರ್ಕಾರದಿಂದ ನಾಮ ನಿರ್ದೇಶಿತರಾದ ಕರ್ನಾಟಕ ಸಣ್ಣ ಮತ್ತು ಪತ್ರಿಕೆಗಳ ಸಂಘ, ಚಿತ್ರದುರ್ಗದ ಓರ್ವ ಪ್ರತಿನಿಧಿ – ಸದಸ್ಯರು
  6. ಸರ್ಕಾರದಿಂದ ನಾಮ ನಿರ್ದೇಶಿತರಾದ ಬೆಂಗಳೂರು ಫೋಟೋ ಜರ್ನಲಿಸ್ಟ್ ಗಳ ಸಂಘದ ಓರ್ವ ಪ್ರತಿನಿಧಿ -ಸದಸ್ಯರು
  7. ವಿಶೇಷ ಆಮಂತ್ರಿತರು (ಇಲಾಖಾ ಮುಖ್ಯಸ್ಥರ ವಿವೇಚನಾಧಿಕಾರ)- ಇಬ್ಬರು ಪ್ರತಿನಿಧಿಗಳು- ಸದಸ್ಯರು
  8. ಉಪನಿರ್ದೇಶಕರು, (ಸುದ್ದಿ ಮತ್ತು ಪತ್ರಿಕಾ ಶಾಖೆ) ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ-ಸದಸ್ಯ ಕಾರ್ಯದರ್ಶಿ

ಸಮಿತಿಯು ವರ್ಷಕ್ಕೆ ಎರಡು ಸಭೆಗಳನ್ನು ಕರೆದು ಸ್ವೀಕೃತವಾದ ಅರ್ಜಿಗಳನ್ನು ನಿಯಮಾನುಸಾರ ಇತ್ಯರ್ಥಪಡಿಸುವುದು.
ಸಮಿತಿಯು ಅನುಮೋದಿಸಿದ ಅರ್ಜಿದಾರರ ಮಾಹಿತಿಯನ್ನು ವಾರ್ತಾ ಇಲಾಖೆಯ ಆಯಾ ಜಿಲ್ಲೆಗಳ ವಾರ್ತಾ ಅಧಿಕಾರಿಗಳು ಇ.ಡಿ.ಸಿಎಸ್ ಸೇವಾ ಸಿಂಧು ತಂತ್ರಾಂಶದಲ್ಲಿ ಅಪ್ ಲೋಡ್ ಮಾಡುವುದು.
ಬಾಪೂಜಿ ಸೇವಾ ಕೇಂದ್ರ, ಬೆಂಗಳೂರು ಒನ್, ಕರ್ನಾಟಕ ಒನ್‌ ಮತ್ತು ಗ್ರಾಮ -ಒನ್ ಗಳ ಮೂಲಕ ಪಾಸ್ ಗಳನ್ನು ವಿತರಿಸಲಾಗುವುದು.
ಈ ಮೇಲ್ಕಂಡ ಷರತ್ತುಗಳ ಜೊತೆಗೆ ಮಾಧ್ಯಮ ಮಾನ್ಯತಾ ನಿಯಮಗಳು-2009 ಅಥವಾ ನಂತರದಲ್ಲಿ ಪರಿಷ್ಕರಣೆಗೊಂಡ ಮಾಧ್ಯಮ ಮಾನ್ಯತಾ ನಿಯಮಗಳಲ್ಲಿರುವ ಸಮಿತಿಯ ಅವಧಿ ಮತ್ತು ಸದಸ್ಯತ್ವ ರದ್ದತಿ, ಮಾನ್ಯತಾ ರದ್ಧತಿ, ನವೀಕರಣ ಅಂಶಗಳು ಇದಕ್ಕೆ ಅನ್ವಯಿಸಲಿವೆ.

ಈ ಯೋಜನೆಗೆ ಅಗತ್ಯವಿರುವ ಅನುದಾನವನ್ನು ವಾಸ್ತವಿಕತೆ (actual)ಯ ಆಧಾರದಲ್ಲಿ ಸಾರಿಗೆ ಇಲಾಖೆಯ ಬೇಡಿಕೆ/ಲೆಕ್ಕಶೀರ್ಷಿಕೆಯಡಿ ಒದಗಿಸಲಾಗುವ ಅನುದಾನದಿಂದ ಭರಿಸತಕ್ಕದ್ದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ಸಂ.ಆಇ 09 ವೆಚ್ಚ-7/2024 ದಿನಾಂಕ:15/04/2024ರಲ್ಲಿ ನೀಡಿರುವ ಸೂಚನೆಗಳನ್ವಯ ಹಾಗೂ ಹಿಂಬರಹ ಸಂ:ಆಇ 699 ವೆಚ್ಚ- 7/2024, ದಿನಾಂಕ:02/09/2024ರಲ್ಲಿ ನೀಡಿರುವ ಸಹಮತಿಯ ಮೇರೆಗೆ ಹಾಗೂ ಸರ್ಕಾರದ ಆದೇಶ ಕಾರ್ಯದರ್ಶಿಯವರಿಗೆ 04 ಟಿಎಫ್‌ಪಿ 2024, ದಿ.04/07/2024ರಲ್ಲಿ ಇಲಾಖಾ ಪ್ರತ್ಯಾಯೋಜಿಸಲಾಗಿರುವ ಅಧಿಕಾರದನ್ವಯ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *