Ad Widget .

ಮಕ್ಕಳ ಅಶ್ಲೀಲ ಚಿತ್ರ ಸಂಗ್ರಹ ವೀಕ್ಷಣೆ ಗಂಭೀರ ಅಪರಾಧ: ಐತಿಹಾಸಿಕ ತೀರ್ಪು ಪ್ರಕಟಿಸಿದ ಸುಪ್ರೀಂ

ಸಮಗ್ರ ನ್ಯೂಸ್‌: ಮಕ್ಕಳ ಅಶ್ಲೀಲ ಚಿತ್ರಗಳನ್ನು ಡೌನ್ ಲೋಡ್ ಮಾಡುವುದಷ್ಟೇ ಅಲ್ಲ ನೋಡುವುದು ಸಹ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಿಸುವ (ಪೋಕ್ಸ್) ಕಾಯ್ದೆಯಡಿ ಅಪರಾಧ ಎಂದು ಸುಪ್ರೀಂ ಕೋರ್ಟ್‌ ಘೋಷಿಸಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಉದ್ದೇಶವಿಟ್ಟುಕೊಂಡು ಸುಪ್ರೀಂಕೋರ್ಟ್ ಈ ಮಹತ್ವದ ತೀರ್ಪು ಪ್ರಕಟಿಸಿದೆ.

Ad Widget . Ad Widget .

28 ವರ್ಷದ ಯುವಕನೊಬ್ಬ ತನ್ನ ಫೋನ್‌ಲ್ಲಿ ಮಕ್ಕಳ ಅಶ್ಲೀಲ ಚಿತ್ರ ಡೌನ್ ಲೋಡ್ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಮಕ್ಕಳ ಅಶ್ಲೀಲ ಚಿತ್ರಗಳನ್ನು ಡೌನ್ ಲೋಡ್ ಮಾಡುವುದು ಮತ್ತು ನೋಡುವುದು ಪೋಕ್ಸ್ ಕಾಯ್ದೆಯಡಿ ಅಪರಾಧ ಆಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿ, ಆ ವ್ಯಕ್ತಿ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿತ್ತು. ಆದರೆ ಈ ತೀರ್ಪನ್ನು ರದ್ದುಗೊಳಿಸಿರುವ ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ, ಇಂಥದ್ದೊಂದು ತೀರ್ಪು ನೀಡಿ ಹೈಕೋರ್ಟ್ ಘೋರ ದೋಷ ಎಸಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು. ಈಗ ಹೈಕೋರ್ಟ್ ತೀರ್ಪನ್ನು ಬದಲಿಸಿರುವ ಸುಪ್ರೀಂಕೋರ್ಟ್, ಯುವಕನ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ಮರುಸ್ಥಾಪಿಸಿದೆ.

Ad Widget . Ad Widget .

ಸುಪ್ರೀಂಕೋರ್ಟ್ ತೀರ್ಪು ಪೋಕ್ಸ್ ಕಾಯ್ದೆಯ ಸೆಕ್ಷನ್ 15ರ ಮೇಲೆ ಕೇಂದ್ರೀಕರಿಸಿದ್ದು, ಇದು ಮಕ್ಕಳನ್ನು ಒಳಗೊಂಡ ಅಶ್ಲೀಲ ಸಾಮಗ್ರಿಗಳ ಸಂಗ್ರಹಕ್ಕೆ ಶಿಕ್ಷೆ ವಿಧಿಸುತ್ತದೆ. ಯಾವುದೇ ವ್ಯಕ್ತಿ ಮಕ್ಕಳ ಕುರಿತ ಅಶ್ಲೀಲ ವಸ್ತು ಸಂಗ್ರಹಿಸಿದರೆ ಮತ್ತು ಅದರ ಬಗ್ಗೆ ತಿಳಿಸಲು ಅಥವಾ ನಾಶಮಾಡದಿದ್ದರೆ 5000 ರೂ.ಗಿಂತ ಕಡಿಮೆ ಅಲ್ಲದ ದಂಡಕ್ಕೆ ಗುರಿಯಾಗುತ್ತಾನೆ. ಅಪರಾಧವನ್ನು ಪುನರಾವರ್ತಿಸಿದರೆ ಕನಿಷ್ಠ ರೂ. 10000 ದಂಡ ವಿಧಿಸಲಾಗುತ್ತದೆ. ಅಶ್ಲೀಲ ವಿಷಯ, ಫೋಟೋಗಳನ್ನು ಮತ್ತಷ್ಟು ಪ್ರಚಾರ ಮಾಡಿದರೆ ದಂಡದ ಜತೆಗೆ, 3 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಮತ್ತು ನಂತರದ ಅಪರಾಧದಲ್ಲಿ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಸೆಕ್ಷನ್ ನಲ್ಲಿ ತಿಳಿಸಲಾಗಿದೆ.

ಭಾರತದಲ್ಲಿ ಲೈಂಗಿಕ ಶಿಕ್ಷಣದ ಬಗ್ಗೆ ತಪ್ಪು ಕಲ್ಪನೆ ವ್ಯಾಪಕವಾಗಿವೆ ಮತ್ತು ಅದರ ಸೀಮಿತ ಅನುಷ್ಠಾನದಿಂದಾಗಿ ಇನ್ನೂ ಪ್ರಭಾವಶಾಲಿಯಾಗಿಲ್ಲ. ಪಾಲಕರು, ಶಿಕ್ಷಕರೂ ಸೇರಿ ಹಲವರು ಲೈಂಗಿಕತೆಯ ಬಗ್ಗೆ ರ್ಚಚಿಸುವುದು ಸೂಕ್ತವಲ್ಲ, ಅದು ಅನೈತಿಕ ಅಥವಾ ಮುಜುಗರದ ಸಂಗತಿ ಎಂಬ ಸಂಪ್ರದಾಯವಾದಿ ಅಭಿಪ್ರಾಯ ಹೊಂದಿದ್ದಾರೆ. ಹೀಗಾಗಿ, ಲೈಂಗಿಕ ಆರೋಗ್ಯದ ಬಗ್ಗೆ ಬಹಿರಂಗ ವಾಗಿ ಮಾತನಾಡದಿರುವುದರಿಂದ ಹದಿಹರೆಯದವರಲ್ಲಿ ಗಮನಾರ್ಹ ಪ್ರಮಾಣದ ಜ್ಞಾನ ಕೊರತೆಗೆ ಇದು ಕಾರಣವಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಲೈಂಗಿಕ ಶಿಕ್ಷಣ ಯುವಕರಲ್ಲಿ ಅಶ್ಲೀಲತೆ ಮತ್ತು ಬೇಜವಾಬ್ದಾರಿ ವರ್ತನೆಯನ್ನು ಉತ್ತೇಜಿಸುತ್ತದೆ ಎಂಬುದು ಪ್ರಚಲಿತದಲ್ಲಿರುವ ತಪ್ಪು ಕಲ್ಪನೆ. ಲೈಂಗಿಕ ಆರೋಗ್ಯ ಮತ್ತು ಗರ್ಭನಿರೋಧಕಗಳ ಬಗ್ಗೆ ಮಾಹಿತಿ ನೀಡುವುದರಿಂದ ಹದಿಹರೆಯದವರಲ್ಲಿ ಹೆಚ್ಚಿನ ಲೈಂಗಿಕ ಚಟುವಟಿಕೆಗೆ ಕಾರಣವಾಗುತ್ತದೆ ಎಂದು ಕೆಲ ವಿಮರ್ಶಕರು ವಾದಿಸುತ್ತಾರೆ. ಆದಾಗ್ಯೂ, ಸಮಗ್ರ ಲೈಂಗಿಕ ಶಿಕ್ಷಣ ವಾಸ್ತವವಾಗಿ ಲೈಂಗಿಕ ಚಟುವಟಿಕೆಗೆ ಒಳಗೊಳ್ಳುವುದನ್ನು ವಿಳಂಬಗೊಳಿಸುತ್ತದೆ. ಮತ್ತು ಲೈಂಗಿಕವಾಗಿ ಸಕ್ರಿಯವಾಗಿರುವವರಲ್ಲಿ ಸುರಕ್ಷಿತ ಅಭ್ಯಾಸಗಳನ್ನು ಉತ್ತೇಜಿಸುತ್ತದೆ ಎಂದು ಸಂಶೋಧನೆ ತೋರಿಸಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಲೈಂಗಿಕ ಶಿಕ್ಷಣವು ಸಾಂಪ್ರದಾಯಿಕ ಭಾರತೀಯ ಮೌಲ್ಯಗಳೊಂದಿಗೆ ಹೊಂದಿಕೆಯಾಗದ ಪಾಶ್ಚಿಮಾತ್ಯ ಪರಿಕಲ್ಪನೆ ಎಂಬ ತಪ್ಪಾಭಿಪ್ರಾಯ ಹಲವರಲ್ಲಿದೆ. ಈ ದೃಷ್ಟಿಕೋನದಿಂದಾಗಿ ಕೆಲ ರಾಜ್ಯಗಳ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣದ ಮೇಲೆ ನಿಷೇಧ ಹೇರಲಾಗಿದೆ. ಈ ರೀತಿಯ ವಿರೋಧ ಸಮಗ್ರ ಮತ್ತು ಪರಿಣಾಮಕಾರಿ ಲೈಂಗಿಕ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅಡ್ಡಿಯಾಗಿ, ಹದಿಹರೆಯದವರಿಗೆ ನಿಖರವಾದ ಮಾಹಿತಿಯಿಲ್ಲ ಎಂಬ ಸ್ಥಿತಿಗೆ ತಳ್ಳುತ್ತದೆ. ಹಾಗಾಗಿಯೇ, ಹದಿಹರೆಯದವರು ಮತ್ತು ವಯಸ್ಕರು ಇಂಟರ್ನೆಟ್‌ನತ್ತ ಮುಖಮಾಡಿ, ಅಸ್ಪಷ್ಟ, ನಿಖರವಲ್ಲ ಮಾಹಿತಿಯನ್ನಷ್ಟೇ ಪಡೆಯುತ್ತಾರೆ. ಇದು ಸಾಮಾನ್ಯವಾಗಿ ತಪ್ಪುದಾರಿಗೆಳೆಯಬಹುದು ಮತ್ತು ಅನಾರೋಗ್ಯಕರ ಲೈಂಗಿಕ ನಡವಳಿಕೆಗೆ ಕಾರಣವಾಗಬಹುದು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

Leave a Comment

Your email address will not be published. Required fields are marked *