ಸ್ನೇಹ, ಪ್ರೇಮದ ನಾಟಕವಾಡಿ ಮಹಿಳೆಯರನ್ನು ವಂಚಿಸಿದ ಆರೋಪಿ ಸೆರೆ

ಸಮಗ್ರ ನ್ಯೂಸ್: ಮಹಿಳೆಯರನ್ನು ಸ್ನೇಹ, ಪ್ರೇಮದ ನಾಟಕವಾಡಿ ಬಲೆಗೆ ಬೀಳಿಸಿ ಆಭರಣ, ನಗದು ಇತ್ಯಾದಿಗಳನ್ನು ದೋಚುತ್ತಿದ್ದ ಕಾರ್ಕಳದ ಬೆಲ್ಮಣ್ ನಿವಾಸಿ ರೋಹಿತ್ ಮಥಾಯಿಸ್ (33) ಎಂಬಾತನನ್ನು ಸೆ.17 ರಂದು ಮಂಗಳೂರು ಕಂಕನಾಡಿ ಪೊಲೀಸರು ಬಂಧಿಸಿದ್ಧಾರೆ.

Ad Widget ... ..

2021ರಲ್ಲಿ ಮಂಗಳೂರಿನ ಕುಲಶೇಖರದ ಕಾಸ್ತಾಲಿನೊ ಕಾಲೋನಿ ಸೆಕ್ರೆಡ್ ಹಾರ್ಟ್ ಎಂಬಲ್ಲಿರುವ ಮಹಿಳೆಯೊಬ್ಬರ ಜೊತೆ ಕೆಲ ಸಮಯ ವಾಸವಿದ್ದು ಅವರ ಚಿನ್ನಾಭರಣ ಮತ್ತು ನಗದು ಲಪಟಾಯಿಸಿಕೊಂಡು ಮುಂಬಯಿಯಲ್ಲಿ ತಲೆಮರಿಸಿಕೊಂಡಿದ್ದ.

Ad Widget

ಇದೇ ರೀತಿ ಮಂಗಳೂರಿನ ಇನ್ನೋರ್ವ ಮಹಿಳೆಯನ್ನು ಬುಟ್ಟಿಗೆ ಹಾಕಿಕೊಳ್ಳಲು ಆತ ಪ್ರಯತ್ನಿಸಿದ್ದ. ಆರಂಭದಲ್ಲಿ ಮಹಿಳೆ ಅವನನ್ನು ನಂಬಿದ್ದರೂ ಬಳಿಕ ಅನುಮಾನಗೊಂಡಿದ್ದರು. ಆಕೆ ನೀಡಿದ ದೂರಿನ ಮೇರೆಗೆ ಪೊಲೀಸರು ಆ ಮಹಿಳೆಯ ಮೂಲಕವೇ ಅವನನ್ನು ಮಂಗಳೂರಿಗೆ ಬರುವಂತೆ ಮಾಡಿ ಬಂಧಿಸಿ, ಅವನಿಂದ 7 ಲಕ್ಷ ರೂ . ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಚಾರಣೆ ವೇಳೆ ಈತ 2019 ರಲ್ಲಿ ಬೆಲ್ಮಣ್‌ನಲ್ಲಿ ನಡೆದ ನಿವೃತ್ತ ಪಿಡಿಒ ಕೊಲೆ ಪ್ರಕರಣದಲ್ಲಿ ಶಾಮೀಲಾಗಿದ್ದ ಎಂದು ತಿಳಿದುಬಂದಿದೆ. ಚಿನ್ನಾಭರಣಕ್ಕಾಗಿ ಕೊಲೆ ಮಾಡಿ ಹೆಣವನ್ನು ತೆಗೆದುಕೊಂಡು ಹೋಗಿ ಬಾವಿಗೆ ಎಸೆದಿದ್ದ. ಈ ಪ್ರಕರಣದಲ್ಲಿ ಸೆರೆಯಾಗಿ ಜಾಮೀನಿನಲ್ಲಿ ಹೊರಬಂದು ಬಳಿಕ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.

ಈ ನಡುವೆ ಫೇಸ್‌ಬುಕ್, ಇನ್ಸಾಗ್ರಾಂ, ವಾಟ್ಸಪ್ ಮುಂತಾದ ಸೋಷಿಯಲ್ ಮೀಡಿಯಾಗಳ ಮೂಲಕ ಮಹಿಳೆಯರನ್ನು ಪರಿಚಯ ಮಾಡಿಕೊಂಡು ವಂಚಿಸುವ ಕೃತ್ಯಕ್ಕೆ ಇಳಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *