ಸಮಗ್ರ ನ್ಯೂಸ್: ಕೋಲ್ಕತ್ತಾದಲ್ಲಿರುವ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ-ಕೊಲೆ ಪ್ರಕರಣ ಖಂಡಿಸಿ ಕಿರಿಯ ವೈದ್ಯರು ನಡೆಸುತ್ತಿರುವ ಮುಷ್ಕರ ಕೈಬಿಡುವಂತೆ ಮಾಡಿಕೊಂಡ ಮನವಿಯ ಭಾಗವಾಗಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಧಿಕೃತ ನಿವಾಸದಲ್ಲಿ ಸೋಮವಾರ ಸಂಜೆ ಸಭೆ ನಡೆದಿದೆ. ಆದರೆ ಮಾತುಕತೆಯ ವಿವರಗಳನ್ನು ದಾಖಲಿಸಲು ಮತ್ತು ಸಹಿ ಹಾಕಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ವೈದ್ಯರೊಂದಿಗೆ ಮಾತುಕತೆಗೆ ನಡೆದ ಸತತ ನಾಲ್ಕು ಪ್ರಯತ್ನಗಳ ನಂತರ, ಸೋಮವಾರ ಸಂಜೆ ಕಾಲಘಾಟ್‌ನಲ್ಲಿರುವ ಮುಖ್ಯಮಂತ್ರಿ ಮನೆಗೆ ವೈದ್ಯರು ಸಭೆಗೆ ತೆರಳಿದ್ದಾರೆ. ಈ ಹಿಂದೆ ಕರೆಯಲಾಗಿದ್ದ ಸಭೆಯ ನೇರ ಪ್ರಸಾರಕ್ಕೆ ರಾಜ್ಯ ಸರ್ಕಾರ ಅವಕಾಶವಿಲ್ಲ ಎಂದಿದ್ದಕ್ಕೆ ವೈದ್ಯರು ಹೊರನಡೆದಿದ್ದರು. ಇದೀಗ ತಮ್ಮ ಷರತ್ತು ಸಡಿಲಿಸಲು ವೈದ್ಯರು ನಿರ್ಧರಿಸಿದ್ದಾರೆ. ಆದರೆ ಸಭೆಯಲ್ಲಿ ನಡೆದ ಚರ್ಚೆಗಳನ್ನು ದಾಖಲಿಸಿ ಅದಕ್ಕೆ ಸಹಿ ಹಾಕುವ ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ರಾಜ್ಯ ಸರ್ಕಾರವೂ ಒಪ್ಪಿಗೆ ಸೂಚಿಸಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಅವರು ವೈದ್ಯರ ಬೇಡಿಕೆಯನ್ನು ಒಪ್ಪಿಕೊಂಡಿರುವುದಾಗಿ ಹಾಗೂ ಸಭೆಯ ನಡಾವಳಿಯ ಸಹಿ ಹಾಕಿದ ಪ್ರತಿಯನ್ನು ಸರ್ಕಾರ ಹಾಗೂ ವೈದ್ಯರಿಗೆ ನೀಡಲಾಗುವುದು ಎಂದಿದ್ದಾರೆ.
ಮತ್ತೊಂದೆಡೆ ರಾಜ್ಯದ ಸ್ವಾಸ್ಥ್ಯ ಸೌಧದ ಎದುರು ವೈದ್ಯರು ಮುಷ್ಕರವನ್ನು ಮುಂದುವರಿಸಿದ್ದಾರೆ.