ಸಮಗ್ರ ನ್ಯೂಸ್: ತಮ್ಮ ಆಸೆ ಈಡೇರಿದಕ್ಕೆ ಮಗನ ತೂಕಕ್ಕೆ ಸಮನಾದ ಹಣವನ್ನು ತುಲಾಭಾರದ ಮೂಲಕ ದೇವಸ್ಥಾನಕ್ಕೆ ಅರ್ಪಿಸುವುದರೊಂದಿಗೆ ರೈತರೊಬ್ಬರು ಹರಕೆ ತೀರಿಸಿದ ಅಪರೂಪದ ಘಟನೆ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಬದ್‌ನಗರದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ರೈತ ಚತುರ್ಭುಜ್ ಜಾಟ್ ಅವರು ತನ್ನ 30 ವರ್ಷದ ಮಗ ವೀರೇಂದ್ರ ಜಾಟ್‌ಗಾಗಿ 4 ವರ್ಷಗಳ ಹಿಂದೆ ಶ್ರೀ ಸತ್ಯವಾಧಿ ದೇವಸ್ಥಾನದಲ್ಲಿ ಹರಕೆಯೊಂದನ್ನು ಕಟ್ಟಿಕೊಂಡಿದ್ದರು. ತಾವು ಅಂದುಕೊಂಡಿದ್ದ ನೆರವೇರಿದ್ದಕ್ಕೆ ತುಂಬಾ ಖುಷಿಯಾಗಿರುವ ಚತುರ್ಭುಜ್ ಜಾಟ್, ತೇಜ ದಶಮಿಯಂದು ತುಲಾಭಾರ ನೆರವೇರಿಸಿ, ದೇವಸ್ಥಾನಕ್ಕೆ ದಾನ ಮಾಡಿ, ಹರಕೆ ತೀರಿಸಿದ್ದಾರೆ. ರೈತ ಚತುರ್ಭುಜ್ ಜಾಟ್ ಯಾವ ಹರಕೆ ಕಟ್ಟಿಕೊಂಡಿದ್ದರು ಎಂಬುದು ಇನ್ನು ಸ್ಪಷ್ಟವಾಗಿಲ್ಲವಾದರೂ, ಅವರು ತಮ್ಮ ಮಗನ ತೂಕಕ್ಕೆ ಸಮನಾದ ಮೊತ್ತವನ್ನು ದೇವಸ್ಥಾನಕ್ಕೆ ದಾನ ಮಾಡಿರುವುದಾಗಿ ತಿಳಿದುಬಂದಿದೆ.
ರೈತನ ಮಗ 83 ಕೆ.ಜಿ. ತೂಕವಿದ್ದಾನೆ. ಅದಕ್ಕಾಗಿ ಸಾಕಷ್ಟು ಹಣದ ಬಂಡಲ್ಗಳನ್ನು ಕಟ್ಟಲಾಯಿತು. ಒಟ್ಟು 10 ಲಕ್ಷದ 7 ಸಾವಿರ ರೂಪಾಯಿಯನ್ನು ತುಲಾಭಾರದಲ್ಲಿ ಇಡಲಾಯಿತು. ತಲಾ 10 ಸಾವಿರ ಬಂಡಲ್ಗಳ ಮೂಲಕ ಹಣವನ್ನು ದೇವಸ್ಥಾನಕ್ಕೆ ತರಲಾಯಿತು. ತಮ್ಮ ನಂಬಿಕೆಯನ್ನು ಈಡೇರಿಸಲು ರೈತ ಚತುರ್ಭುಜ್ ಜಾಟ್ ಮತ್ತು ಅವರ ಕುಟುಂಬ ಅನುಸರಿಸಿದ ವಿಶೇಷ ಮಾರ್ಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ದೇಣಿಗೆಯಿಂದ ದೇವಸ್ಥಾನಕ್ಕೆ ಆರ್ಥಿಕ ನೆರವು ಒದಗಿದಂತಾಗಿದೆ.