ಸಮಗ್ರ ನ್ಯೂಸ್: ರಾಷ್ಟ್ರೀಯ, ಅಂತಾರಾಷ್ಟ್ರೀಯ ಮನ್ನಣೆ ಇರುವ ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಮಧ್ಯಮ ಮತ್ತು ಕೆಳವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣದ ಹೊಸ ಸಾಧ್ಯತೆಗಳನ್ನು ಪರಿಚಯಿಸಿದ ಹೆಗ್ಗಳಿಕೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ತನ್ನಲ್ಲಿರುವ 19 ವಿವಿಧ ಶಿಕ್ಷಣ ಸಂಸ್ಥೆಗಳ ಜತೆಗೆ ನೂತನ ಕಾನೂನು ಕಾಲೇಜ್ ಅನ್ನು ಆರಂಭಿಸುತ್ತಿದೆ.
ಈ ಶೈಕ್ಷಣಿಕ ವರ್ಷದಿಂದಲೇ 5 ವರ್ಷಗಳ, ಬಿಕಾಂ ಸಹಿತ ಎಲ್‌ಎಲ್‌ಬಿ ಮತ್ತು 3 ವರ್ಷಗಳ ಎಲ್‌ಎಲ್‌ಬಿ ಕೋರ್ಸಿಗೆ ದಾಖಲಾತಿ ಆರಂಭವಾಗಿದೆ ಎಂದು ಆಳ್ವಾಸ್ ಪ್ರವರ್ತಕ ಡಾ| ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಹೊಸ ಕಾನೂನು ಕಾಲೇಜ್ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯಕ್ಕೆ(ಕೆಎಸ್‌ಎಲ್‌ಯು) ಸಂಯೋಜನೆಗೊಂಡಿದ್ದು, ಬಾರ್ ಕೌನ್ಸಿಲ್ ಆಫ್ ಇಂಡಿಯಾದಿಂದ ಅನುಮೋದನೆ ಪಡೆದಿದೆ ಎಂದರು. ಕರಾವಳಿ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಅತೀ ಹೆಚ್ಚು ಉದ್ಯೋಗ ಸಾಧ್ಯತೆ ಇರುವ 5 ವರ್ಷಗಳ ಬಿಕಾಂ ಎಲ್‌ಎಲ್‌ಬಿ ಪದವಿಯನ್ನು 60 ವಿದ್ಯಾರ್ಥಿ ಪರಿಮಿತಿಯೊಂದಿಗೆ ಹಾಗೂ 3 ವರ್ಷಗಳ ಎಲ್‌ಎಲ್‌ಬಿ ಪದವಿಯನ್ನು 60 ವಿದ್ಯಾರ್ಥಿ ಮಿತಿಯೊಂದಿಗೆ ಈ ವರ್ಷದಿಂದಲೇ ಆರಂಭಿಸಲು ಅನುಮತಿ ದೊರೆತಿದೆ.
ಕಾನೂನು ಶಿಕ್ಷಣದಲ್ಲಿ ಉತ್ತಮ ಅನುಭವ ಹೊಂದಿರುವ ಶಿಕ್ಷಕರನ್ನು ಈಗಾಗಲೇ ನೇಮಿಸಿದ್ದು, ಗುಣಾತ್ಮಕವಾದ ಕಾನೂನು ಶಿಕ್ಷಣಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕಟಿಬದ್ಧವಾಗಿದೆ. ದ್ವಿತೀಯ ಪಿಯುಸಿಯಲ್ಲಿ ವಾಣಿಜ್ಯ ಅಥವಾ ವಿಜ್ಞಾನ ಶಾಖೆಗಳನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಬಿಕಾಂ ಎಲ್‌ಎಲ್‌ಬಿ ಪ್ರವೇಶಾತಿಗೆ ಅರ್ಹರು. ಯಾವುದೇ ಪದವಿ ಪೂರ್ಣಗೊಳಿಸಿ ರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು 3 ವರ್ಷಗಳ ಎಲ್‌ಎಲ್‌ಬಿ ಪದವಿಗೆ ದಾಖಲಾತಿಗೆ ಅರ್ಹತೆ ಪಡೆಯುತ್ತಾರೆ.