ಸಮಗ್ರ ನ್ಯೂಸ್: ಹರಿಯಾಣ ವಿಧಾನಸಭೆ ಚುನಾವಣೆಗೆ ಬಿಜೆಪಿಯು 21 ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 90 ಸದಸ್ಯ ಬಲದ ವಿಧಾನಸಭೆಗೆ ಈವರೆಗೆ 87 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರ್ಪಡೆಯಾದ ಕುಸ್ತಿಪಟು ವಿನೇಶ್ ಪೋಗಟ್ ವಿರುದ್ಧ ಜುಲಾನಾ ಕ್ಷೇತ್ರದಿಂದ ಕ್ಯಾಪ್ಟನ್ ಯೋಗೇಶ್ ಬೈರಾಗಿ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.
67 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಪಕ್ಷವು ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರನ್ನು ಕರ್ನಾಲ್‌ನಿಂದ ಲಾಡ್ಯಾ ಸ್ಥಾನಕ್ಕೆ ಕಣಕ್ಕಿಳಿಸಿದೆ. ಸೈನಿ ಅವರು 2019ರಿಂದ 2024ರ ಅವಧಿಯಲ್ಲಿ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವ ಓಂ ಪ್ರಕಾಶ್ ಧನಕರ್ ಅವರನ್ನು ಬದ್ಧಿ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಈ ಹಿಂದೆ ಜನನಾಯಕ್ ಜನತಾ ಪಾರ್ಟಿ (ಜೆಜೆಪಿ)ಯಲ್ಲಿದ್ದ ದೇವೆಂದರ್ ಸಿಂಗ್ ಸದ್ಯ ಬಿಜೆಪಿಯಿಂದ ಬಬ್ಲಿ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಹರಿಯಾಣದ ಮಾಜಿ ಸಿಎಂ ಬನ್ನಿ ಲಾಲ್ ಅವರ ಮೊಮ್ಮಗಳು ಶ್ರುತಿ ಚೌಧರಿ ತೋಷಮ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.