Ad Widget .

ಪಶ್ಚಿಮದಿಂದ ಪೂರ್ವಕ್ಕೆ ಹರಿದ ನೇತ್ರಾವತಿ| ಎತ್ತಿನಹೊಳೆ ಯೋಜನೆಗೆ ಅಧಿಕೃತ ಚಾಲನೆ

ಸಮಗ್ರ ನ್ಯೂಸ್: ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ದೊಡ್ಡನಗರದ ಪಂಪ್ ಹೌಸ್‌ನಲ್ಲಿ ನೀರೆತ್ತುವ ಪಂಪ್‌ಗಳಿಗೆ ಶುಕ್ರವಾರ ಚಾಲನೆ ದೊರಕಿದ ಕೆಲ ಹೊತ್ತಿನಲ್ಲಿ ಸುಮಾರು 6 ಕಿಲೋಮೀಟರ್‌ ದೂರದ ಹೆಬ್ಬನಹಳ್ಳಿಯಲ್ಲಿರುವ ನೀರು ವಿತರಣೆಯ ನಾಲ್ಕು ತೊಟ್ಟಿಗಳಲ್ಲಿ ನೀರು ಉಕ್ಕೇರಿತು. ಇದರೊಂದಿಗೆ ಬಯಲುಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯ ದಶಕದ ಕನಸು ನನಸಾದ ಸಂಭ್ರಮ ಜನರಲ್ಲಿ ಉಕ್ಕಿ ಹರಿಯಿತು.

Ad Widget . Ad Widget .

ಪಶ್ಚಿಮಕ್ಕೆ ಹರಿದು ನೇತ್ರಾವತಿ ನದಿಯಾಗಿ ಕರಾವಳಿಯಲ್ಲಿ ಸಾಗುತ್ತಿದ್ದ ಎತ್ತಿನ ಹೊಳೆ, ಕಾಡುಮನೆ ಹೊಳೆ, ಹೊಂಗಡ ಹಳ್ಳ, ಕೇರಿ ಹೊಳೆ ಶುಕ್ರವಾರದಿಂದ ಪೂರ್ವಾಭಿಮುಖವಾಗಿಯೂ ಹರಿಯ ತೊಡಗಿದವು. ಪಶ್ಚಿಮಕ್ಕೆ ಹರಿಯುತ್ತಿದ್ದ ನೀರಿನಲ್ಲಿ ಒಂದಂಶ ನೀರನ್ನು ಪೂರ್ವದ ಜಿಲ್ಲೆಗಳಿಗೆ ಹರಿಸುವ ಈ ಯೋಜನೆಯ ಮೊದಲ ಹಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದರು.

Ad Widget . Ad Widget .

ಜಲ ಸಂಪನ್ಮೂಲ ಇಲಾಖೆ, ವಿಶ್ವೇಶ್ವರಯ್ಯ ಜಲ ನಿಗಮ ರೂಪಿಸಿರುವ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1 ಇದಾಗಿದ್ದು, 2027ರ ಹೊತ್ತಿಗೆ ಪೂರ್ಣ ಪ್ರಮಾಣದಲ್ಲಿ ಯೋಜನೆ ಅನುಷ್ಠಾನಕ್ಕೆ ಬರಲಿದೆ. ಬಯಲುಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಈ ಯೋಜನೆಯನ್ನು 2010ರಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರವು ರೂಪಿಸಿತ್ತು. 2012ರಲ್ಲಿ ಅಂದಿನ ಮುಖ್ಯಮಂತ್ರಿ ಸದಾನಂದಗೌಡ ಅವರು ₹8,000 ಕೋಟಿ ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದರು. 2014ರಲ್ಲಿ ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಯೋಜನೆಗೆ ಭೂಮಿಪೂಜೆ ನೆರವೇರಿಸಿದ್ದರು. ಈಗ ಅವರೇ ಯೋಜನೆಯಡಿ ಮೊದಲ ಹಂತದಲ್ಲಿ ನೀರು ಹರಿಸುವ ಕಾರ್ಯಕ್ಕೂ ಚಾಲನೆ ನೀಡಿದರು.

ಈ ಯೋಜನೆಯಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಿಗೆ ನೀರು ಹರಿಯಲಿದೆ. ಮೊದಲ ಹಂತದಲ್ಲಿ ಗುರುತ್ವ ಕಾಲುವೆಯಿಂದ 32.5 ಕಿ.ಮೀ. ನಾಲಾ ಎಸ್ಕೇಪ್ ಮೂಲಕ ವೇದ ವ್ಯಾಲಿಯನ್ನು ನೀರು ಪ್ರವೇಶಿಸಲಿದೆ. ಹಳೇಬೀಡು ಕೆರೆ, ಬೆಳವಾಡಿ ಕೆರೆ ಪ್ರವೇಶಿಸಿ, ಚಿತ್ರದುರ್ಗದ ವಾಣಿ ವಿಲಾಸ ಸಾಗರಕ್ಕೆ ಹರಿಯಲಿದೆ.

Leave a Comment

Your email address will not be published. Required fields are marked *