ಸಮಗ್ರ ನ್ಯೂಸ್: ಸರ್ಕಾರಿ ಶಾಲೆಯನ್ನು ನಂದನವನವಾಗಿ ಪರಿವರ್ತಿಸಿ, ವಿದ್ಯಾರ್ಥಿಗಳ ಪ್ರತಿಭೆಗೆ ನೀರೆರೆಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಶಿಕ್ಷಕರಿಗೆ ಈ ಬಾರಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ.
ಪ್ರಾಥಮಿಕ ಶಾಲಾ ವಿಭಾಗದಲ್ಲಿ ಮೂಡುಬಿದಿರೆ ತಾಲ್ಲೂಕಿನ ನೀರ್ಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಯಮುನಾ ಕೆ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಬೆಳ್ತಂಗಡಿ ತಾಲ್ಲೂಕು ಗುರುವಾಯನಕೆರೆಯ ಸರ್ಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ವಿಶ್ವನಾಥ ಗೌಡ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಗುರುವಾರ ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಮೂಡುಬಿದಿರೆ ಪಟ್ಟಣದಿಂದ ಅನತಿ ದೂರದಲ್ಲಿರುವ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗಿತ್ತು. ಮಕ್ಕಳ ಸಂಖ್ಯೆ ಹೆಚ್ಚಿಸುವ ಮೂಲಕ ಶಾಲೆಗೆ ಜೀವಕಳೆ ತುಂಬಬೇಕೆಂಬ ಛಲದಿಂದ ಮಾಡಿರುವ ಪ್ರಯತ್ನಕ್ಕೆ ಯಶಸ್ಸು ದೊರೆತಿದೆ. ಗುಣಮಟ್ಟದ ಶಿಕ್ಷಣವೇ ನಮ್ಮ ಶಾಲೆಯ ಮುಖ್ಯ ಗುರಿ. ಮಕ್ಕಳನ್ನು ಸ್ಪರ್ಧಾತ್ಮಕವಾಗಿ ಬೆಳೆಸಲು ಎಲ್ಲ ಶಿಕ್ಷಕರು ಶ್ರಮಿಸುತ್ತಾರೆ. ಪ್ರತಿಭಾ ಕಾರಂಜಿ, ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳು, ಶಿಕ್ಷಣ ಎಲ್ಲರಲ್ಲೂ ಮಕ್ಕಳು ಮುಂಚೂಣಿಯಲ್ಲಿದ್ದಾರೆ. ಪ್ರಸ್ತುತ 340 ಮಕ್ಕಳು ಕಲಿಯುತ್ತಿದ್ದು, ಇಂಗ್ಲಿಷ್ ಮಾಧ್ಯಮ ಶಿಕ್ಷಣವೂ ಇದೆ. ಎಲ್‌ಕೆಜಿ, ಯುಕೆಜಿಯೂ ಪ್ರಾರಂಭಗೊಂಡಿದೆ. ಎಂಟು ಕಾಯಂ ಶಿಕ್ಷಕರು ಸೇರಿದಂತೆ ಒಟ್ಟು 15 ಶಿಕ್ಷಕರಿದ್ದಾರೆ. ಮಾದರಿ ಶಾಲೆಯಾಗಿ ರೂಪಿಸಿರುವ ಹೆಮ್ಮೆ ಇದೆ ಎಂದು ಯಮುನಾ ತಿಳಿಸಿದ್ದಾರೆ.
ಹಸಿರು ಪರಿಸರ, ನಡುವೆ ಬೃಹದಾಕಾರದ ಬಂಡೆಗಳು, ಇವುಗಳ ಮಧ್ಯೆ ಇರುವ ಗುರುವಾಯಕೆರೆ ಶಾಲೆಯು ಮಕ್ಕಳಷ್ಟೇ ಅಲ್ಲ, ಜನರನ್ನೂ ಸೆಳೆಯುತ್ತಿದೆ. ಶಾಲೆಯ ಒಂದು ದೊಡ್ಡ ಕೊಠಡಿಯನ್ನು ಅಕ್ವೇರಿಯಂ ಮಾದರಿಯಲ್ಲಿ ರೂಪಿಸಲಾಗಿದೆ. ಬಂಡೆಗೆ ಆನೆಯ ಮುಖವಾಡ, ಶಾಲೆಯ ಎದುರಲ್ಲಿ ಕಥಕ್ಕಳಿ ನೃತ್ಯ, 12 ಅಡಿ ಎತ್ತರದ ಚಿಟ್ಟೆಯ ಪ್ರತಿಕೃತಿ ಮಕ್ಕಳ ಮನಸೂರೆಗೊಳ್ಳುತ್ತದೆ.
‘ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇತ್ತು. ಎಲ್ಲ ಶಿಕ್ಷಕರು ಮನೆ-ಮನೆಗೆ ಭೇಟಿ ನೀಡಿ, ಪಾಲಕರಿಗೆ ತಿಳಿಹೇಳಿ, ಮಕ್ಕಳ ಸಂಖ್ಯೆ ಹೆಚ್ಚಿಸಿದೆವು. ಪ್ರಸ್ತುತ 350 ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಮಕ್ಕಳಿಗೆ ಶಾಲೆಯ ಪರಿಸರವು ಓದಿಗೆ ಪೂರಕವಾಗಿರಬೇಕು ಎಂಬ ಕನಸಿನೊಂದಿಗೆ ಶಾಲೆಯ ಎಲ್ಲ ಗೋಡೆಗಳ ಮೇಲೆ ಚಿತ್ತಾರ ಸೃಷ್ಟಿಸಿದ್ದೇವೆ. 25 ಅಡಿ ಎತ್ತರದ ಬಾಲಬುದ್ಧನ ಮೂರ್ತಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ’ ಎಂದು ವಿಶ್ವನಾಥ ಗೌಡ ಅಭಿಪ್ರಾಯ ಪಟ್ಟಿದ್ದಾರೆ.