ಸಮಗ್ರ ನ್ಯೂಸ್: ಕಡಬ ಸರಕಾರಿ ಪದವಿಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆಸಿ ಕೊಲೆ ಮಾಡಲು ಪ್ರಯತ್ನಿಸಿದ ಆರೋಪದಡಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿರುವ ಯುವಕನ ಜಾಮೀನು ಅರ್ಜಿಯನ್ನು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸರಿತಾ.ಡಿ. ಅವರು ವಜಾಗೊಳಿಸಿದ್ದಾರೆ.
ಕೇರಳ ಮಲ್ಲಾಪುರದ ಅಬಿನ್.ಪಿ.ಸಿ.ಬಿ. ಎಂಬಾತ ತನ್ನನ್ನು ನಿರ್ಲಕ್ಷಿಸುತ್ತಿದ್ದಾಳೆ ಎಂಬ ಕಾರಣದಿಂದ ಕಡಬ ಸರಕಾರಿ ಪದವಿಪೂರ್ವ ಕಾಲೇಜಿನ ಸಮವಸ್ತ್ರವನ್ನು ಹೊಲಿಸಿ ಪಡೆದುಕೊಂಡು ಕೊಯಮತ್ತೂರಿನಿಂದ ಆ್ಯಸಿಡ್ ಖರೀದಿಸಿ ಸಮವಸ್ತ್ರ ಧರಿಸಿಕೊಂಡು ಮಾ. 4ರಂದು ಬೆಳಿಗ್ಗೆ ಕಾಲೇಜಿಗೆ ಬಂದು ದ್ವಿತೀಯ ಪಿಯುಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಕೊಲೆ ಮಾಡುವ ಉದ್ದೇಶದಿಂದ ಆ್ಯಸಿಡ್ ದಾಳಿ ನಡೆಸಿದ್ದ. ಈ ವೇಳೆ ಇತರ ಇಬ್ಬರು ವಿದ್ಯಾರ್ಥಿನಿಯರಿಗೂ ಗಾಯವಾಗಿತ್ತು.
ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಅಭಿಯೋಜನೆಯ ಹಾಗೂ ಆರೋಪಿ ಪರ ವಾದ ಆಲಿಸಿ ಪ್ರಸ್ತುತ ವಿದ್ಯಾರ್ಥಿನಿಯರ ಪರಿಸ್ಥಿತಿಯನ್ನು ಅಭಿಯೋಜನೆಯು ವಾದ ಕಾಲಕ್ಕೆ ಹಾಜರು ಪಡಿಸಿದ ವೈದ್ಯಕೀಯ ಧೃಡಪತ್ರದ ಮೂಲಕ ತಿಳಿದುಕೊಂಡು ಈಗಲೂ ವಿದ್ಯಾರ್ಥಿನಿಯರು ಚಿಕಿತ್ಸೆ ಪಡೆದುಕೊಳ್ಳುತ್ತಿರುವುದು ಕಂಡು ಬಂದಿದ್ದರಿಂದ ಆರೋಪಿಗೆ ಜಾಮೀನು ನೀಡಿದ್ದಲ್ಲಿ ಅವರಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ ಎಂದು ಅಭಿಪ್ರಾಯಪಟ್ಟು ದೋಷಾರೋಪಣಾ ಪತ್ರದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಹಾಗೂ ಪ್ರಕರಣದ ತೀವ್ರತೆಯನ್ನು ಗಮನಿಸಿ ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ. ಅಭಿಯೋಜನೆಯ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಜಯಂತಿ. ಕೆ. ಭಟ್ ವಾದಿಸಿದ್ದರು.