ಸಮಗ್ರ ನ್ಯೂಸ್: ತುಳು ಭಾಷೆಯ ಹಾಸ್ಯ ವಿಡಿಯೋಗಳಿಗೆ ಹೆಸರುವಾಸಿಯಾದ ಕಾಂಟೆಂಟ್ ಕ್ರಿಯೇಟರ್ ರಕ್ಷಿತಾ ವಿವಾದವೊಂದನ್ನು ಸೃಷ್ಟಿಸಿದ್ದಾಳೆ. ಕರ್ನಾಟಕದಲ್ಲಿ ಮಾತೃಭಾಷೆ ಕನ್ನಡ ಆದರೆ ಮಂಗಳೂರಲ್ಲಿ ಮಾತೃಭಾಷೆ ತುಳು ಎಂದು ಹೇಳಿದ್ದು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.
ರಕ್ಷಿತಾ ಬೆಂಗಳೂರು ಪ್ರವಾಸದ ವೇಳೆ ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದಾಗ ತಾನೇ ಸೆರೆಹಿಡಿದ ವಿಡಿಯೋದಲ್ಲಿ ವಿವಾದಿತ ಹೇಳಿಕೆಯನ್ನು ನೀಡಿದ್ದಾಳೆ. ಆಟೋ ಚಾಲಕ, ಕರ್ನಾಟಕದ ಮಾತೃಭಾಷೆ ಕನ್ನಡ, ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ರಕ್ಷಿತಾ, ಕರ್ನಾಟಕದಲ್ಲಿ ಕನ್ನಡ ಆದರೆ ಮಂಗಳೂರಲ್ಲಿ ನನ್ನ ಮಾತೃಭಾಷೆ ತುಳು. ಅರ್ಥ ಆಯ್ತಾ? ಮಂಗಳೂರು, ಉಡುಪಿಯಲ್ಲಿ ಯಾರು ಕೂಡಾ ಜಾಸ್ತಿ ಕನ್ನಡ ಮಾತಾಡಲ್ಲ. ಎಲ್ಲರೂ ತುಳು ಮಾತನಾಡುತ್ತಾರೆ, ಗೊತಾಯ್ತಾ? ಎಂದು ಆಟೋ ಚಾಲಕನಿಗೆ ಪ್ರತಿಕ್ರಿಯಿಸಿದ್ದಾಳೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ತುಳು ಭಾಷಿಕರು ಮೆಚ್ಚುಗೆ ವ್ಯಕ್ತಪಡಿಸಿದರೆ, ಕನ್ನಡಿಗರು ಕಿಡಿ ಕಾರಿದ್ದಾರೆ. ಕರ್ನಾಟಕದಲ್ಲಿ ಕನ್ನಡ ಮಾತೃಭಾಷೆಯಾಗಿದೆ. ಬೇರೆ ಯಾವುದೇ ಭಾಷೆ ಮಾತೃಭಾಷೆಯಾಗಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಕೆಲವರು ರಕ್ಷಿತಾ ಹೇಳಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋವೊಂದರಲ್ಲಿ ಕರ್ನಾಟಕದಲ್ಲಿ ಕನ್ನಡ ಎನ್ನುವುದು ಬಿಟ್ಟು ಇತರ ಭಾಷೆಗಳನ್ನೂ ಕನ್ನಡದಂತೆ ಗೌರವಿಸುವುದನ್ನು ಕಲಿಯಿರಿ. ಕನ್ನಡದ ಜನರಿಗೆ ತುಳು ಭಾಷೆಯ ಮಹತ್ವವನ್ನು ತುಳುವೆದಿ ರಕ್ಷಿತಾ ಹೇಳಿಕೊಟ್ಟಿದ್ದಾಳೆ ಎಂದು ಶ್ಲಾಘಿಸಿದ್ದಾರೆ.