ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಮಳೆ ಹೆಚ್ಚಳದ ಪರಿಣಾಮ ಈರುಳ್ಳಿಯ ಉತ್ಪಾದನೆಯಲ್ಲಿ ಭಾರಿ ಕುಸಿತ ಕಂಡಿದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬರದೇ ಇರುವುದು ರಾಜ್ಯಕ್ಕೆ ಪುಣೆ, ಮಹಾರಾಷ್ಟ್ರದಿಂದ ಈರುಳ್ಳಿ ತರುಹಿಸಿಕೊಳ್ಳುವುದರಿಂದ ಒಂದು ಕೆಜಿ ಈರುಳ್ಳಿಯ ಬೆಲೆ 60-70 ರೂಪಾಯಿ ಆಗಿದೆ.
ಹಬ್ಬದ ವೇಳೆಗೆ ಈರುಳ್ಳಿಯ ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯಾತೆ ಇದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಈ ಹಿಂದೆ ಉತ್ತರ ಕರ್ನಾಟಕ ಭಾಗದಿಂದ ರಾಜ್ಯಕ್ಕೆ ಈರುಳ್ಳಿ ಪೂರೈಕೆಯಾಗುತ್ತಿತ್ತು. ಆದರೆ, ಉತ್ತರ ಕರ್ನಾಟಕದಲ್ಲಿ ಹೆಚ್ಚು ಮಳೆಯಾಗುತ್ತಿರುವ ಪರಿಣಾಮ ಈರುಳ್ಳಿ ಬೆಳೆ ಕೊಳೆತು ಹೋಗುತ್ತಿದೆ. ಹೀಗಾಗಿ ಈರುಳ್ಳಿ ಪೂರೈಕೆ ಕಡಿಮೆಯಾಗಿದೆ.
ಯಶವಂತಪುರ ಹಾಗೂ ದಾಸನಪುರ ಎಪಿಎಂಸಿಗೆ ಆ. 28ರಂದು 127 ಲಾರಿಗಳಲ್ಲಿ 38,415 ಚೀಲ ಈರುಳ್ಳಿ ಆವಕವಾಗಿತ್ತು. ಇದರಲ್ಲಿ ರಾಜ್ಯದ ಹತ್ತಿಪ್ಪತ್ತು ಲಾರಿಗಳು ಮಾತ್ರ ಸೇರಿವೆ. ಉಳಿದವೆಲ್ಲವು ಪುಣಾದಿಂದ ಬಂದಿವೆ. ಸಗಟು ದರ ಕ್ವಿಂಟಲ್‌ಗೆ ಕನಿಷ್ಠ 2 ಸಾವಿರದಿಂದ ಗರಿಷ್ಠ 4500 ರೂ. ಇತ್ತು. ನಗರದ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 55ರಿಂದ 60 ರೂ.ಗೆ ಮಾರಾಟವಾಗಿದೆ. ಬೆಳ್ಳುಳ್ಳಿಯೂ ದುಬಾರಿ ಈರುಳ್ಳಿ ಮಾತ್ರವಲ್ಲದೆ ಬೆಳ್ಳುಳ್ಳಿ ದರ ಕೂಡ ಕೆಜಿಗೆ 400 ರೂ.ಗೆ ಏರಿಕೆಯಾಗಿದೆ. ಇದಕ್ಕೂ ಅತಿವೃಷ್ಟಿಯೇ ಕಾರಣ ಎನ್ನಲಾಗಿದೆ. ಆ.28ರಂದು ಮಾರುಕಟ್ಟೆಯಲ್ಲಿ ಕೇಜಿಗೆ 400 ರೂ. ದರವಿತ್ತು. ಕಳೆದ ಡಿಸೆಂಬರ್, ಜನವರಿ ವೇಳೆಗೆ ಬೆಳ್ಳುಳ್ಳಿ ಕೆಜಿಗೆ ದಾಖಲೆಯ 500ವರೆಗೆ ಏರಿಕೆಯಾಗಿ ಬಳಿಕ 280, 250 ರೂ.ವರೆಗೆ ಇಳಿಕೆಯಾಗಿತ್ತು.
ಕರ್ನಾಟಕಕ್ಕೆ ಮಧ್ಯಪ್ರದೇಶ ಹಾಗೂ ರಾಜಸ್ಥಾನದಿಂದಲೇ ಬೆಳ್ಳುಳ್ಳಿ ಪೂರೈಕೆಯಾಗುತ್ತಿದೆ. ಆ ರಾಜ್ಯಗಳಲ್ಲಿ ಮಳೆ ಹೆಚ್ಚಾಗಿ ಬೆಳ್ಳುಳ್ಳಿ ಉತ್ಪಾದನೆ ಕುಸಿತವಾಗಿರುವುದೇ ದರ ಹೆಚ್ಚಳಕ್ಕೆ ಕಾರಣ. ಬೆಳ್ಳುಳ್ಳಿ ದರ ಕೆಜಿಗೆ 450 ರೂ.ವರೆಗೂ ಏರಿಕೆಯಾಗಬಹುದು ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ.ಈರುಳ್ಳಿ, ಬೆಳ್ಳುಳ್ಳಿ ಜತೆಗೆ ತರಕಾರಿಗಳ ಬೆಲೆ ಕೂಡ ಕೊಂಚ ಜಾಸ್ತಿಯಾಗಿದೆ. ಇದೆ ರೀತಿ ಮಳೆ ಜಾಸ್ತಿಯಾದರೆ ತರಕಾರಿಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.