ಸಮಗ್ರ ನ್ಯೂಸ್: ಭಟ್ ಎನ್ ಭಟ್ ಯುಟ್ಯೂಬ್ ಚಾನಲ್ ಅಂದಾಗ ಕಣ್ಣ ಮುಂದೆ ಬರೋದು ಲುಂಗಿಯುಟ್ಟು, ತಲೆಗೆ ಮುಂಡಾಸ ಕಟ್ಟಿ, ಅಪ್ಪಟ ಕನ್ನಡದಲ್ಲಿ ಮಾತನಾಡುವ ಸುದರ್ಶನ್ ಭಟ್. ದೇಶ ಮಾತ್ರವಲ್ಲ ವಿದೇಶದಲ್ಲೂ ಪ್ರಸಿದ್ಧಿ ಪಡೆದಿರುವ ಅಡುಗೆ ಚಾನೆಲ್ ಗಳಲ್ಲಿ ಭಟ್ ಎನ್ ಭಟ್ ಚಾನೆಲ್ ಸೇರಿದೆ.
ದಕ್ಷಿಣ ಭಾರತದ ಪ್ರಸಿದ್ಧ ಅಡುಗೆಗಳೆಲ್ಲ ನಿಮಗೆ ಈ ಯುಟ್ಯೂಬ್ ಚಾನೆಲ್ ನಲ್ಲಿ ಲಭ್ಯವಿದೆ. ಸುದರ್ಶನ್ ಭಟ್ ಅವರ ಈ ಯುಟ್ಯೂಬ್ ಚಾನೆಲ್ ನೋಡುವ ಪ್ರತಿಯೊಬ್ಬ ವೀಕ್ಷಕರು ಈಗ ಖುಷಿಯಾಗಿದ್ದಾರೆ. ಸುದರ್ಶನ್ ಭಟ್ ಹೊಸ ಜೀವನಕ್ಕೆ ಕಾಲಿಡ್ತಿದ್ದಾರೆ. ಅವರ ಎಂಗೇಜ್ಮೆಂಟ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಅವರು ಎಂಗೇಜ್ಮೆಂಟ್ ಫೋಟೋ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಜನರು ಸುದರ್ಶನ್ ಭಟ್ ಬದಲು ಅವರನ್ನು ಕೈ ಹಿಡಿಯಲಿರುವ ಹುಡುಗಿ ಅದೃಷ್ಟ ಮಾಡಿದ್ದಾರೆ ಎನ್ನುತ್ತಿದ್ದಾರೆ.
ಸುದರ್ಶನ್ ಭಟ್ ಕೈ ಹಿಡಿಯಲಿರುವ ಯುವತಿ ಹೆಸರು ಕೃತಿ . ಆಗಸ್ಟ್ 23ರಂದು ಅವರ ನಿಶ್ಚಿತಾರ್ಥ ನಡೆದಿದೆ. ಶೀಘ್ರವೇ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಬೆಳಂದೂರಿನ ಕೃತಿ, ಖಾಸಗಿ ಶಾಲೆ ಶಿಕ್ಷಕಿಯಾಗಿ ಕೆಲಸ ಮಾಡ್ತಿದ್ದಾರೆ. ಅತ್ಯುತ್ತಮ ವ್ಯಕ್ತಿಯೊಂದಿಗೆ ಜೀವನದ ಮುಂದಿನ ಪಯಣ ಶುರು ಮಾಡುತ್ತಿದ್ದೇನೆ. ತುಂಬಾ ಪ್ರೀತಿ, ಉತ್ಸುಕತೆ ಇದೆ ಎಂದು ಕೃತಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೀರ್ಷಿಕೆ ಹಾಕಿ ಎರಡು ಫೋಟೋ ಹಂಚಿಕೊಂಡಿದ್ದಾರೆ. ಅದನ್ನು ಸುದರ್ಶನ್ ಭಟ್ ತಮ್ಮ ಇನ್ಸ್ಟಾಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಸುದರ್ಶನ್ ಭಟ್ ರಿಂಗ್ ಹಿಡಿದು ಕೃತಿ ಜೊತೆ ನಿಂತಿದ್ರೆ ಇನ್ನೊಂದರಲ್ಲಿ ಕೃತಿಗೆ ಏನೋ ತೋರಿಸುತ್ತಿರುವ ಫೋಟೋವನ್ನು ಹಂಚಿಕೊಳ್ಳಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್ ಆಗಿದೆ. ಭಟ್ರಿಗೆ ಅಡುಗೆ ಮಾಡಲು ಭಡ್ತಿ ಬಂದ್ರು ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಕೃತಿ ನಿಜವಾಗ್ಲೂ ಪುಣ್ಯ ಮಾಡಿದ್ದರು ಎಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ. ಭಟ್ರಿಗೆ ಎಲ್ಲ ರೀತಿಯ ಅಡುಗೆ ಮಾಡೋದು ಗೊತ್ತು. ಅಡುಗೆಯಲ್ಲಿ ಅವರು ಎತ್ತಿದ ಕೈ. ಹಾಗಾಗಿ ಅವರ ಪತ್ನಿ ಲಕ್ಕಿ ಅನ್ನೋದು ಅಭಿಮಾನಿಗಳ ಮಾತು. ಭಟ್ರಿಗೆ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ. ಎಲ್ಲರೂ ಗುಡ್ ಲಕ್ ಅಂತ ವಿಶ್ ಮಾಡಿದ್ದಾರೆ.
ಸುದರ್ಶನ್ ಭಟ್, ಕೇರಳದ ಕಾಸರಗೋಡು ಜಿಲ್ಲೆಯ ಸೀತಂಗೋಳಿಯವರು. ಮಂಗಳೂರು ಕನ್ನಡ ಮಾತನಾಡುವ ಅವರು, ಸಹೋದರ ಮನೋಹರ್ ಭಟ್ ಜೊತೆ ಸೇರಿ ಭಟ್ ಎನ್ ಭಟ್ ಚಾನೆಲ್ ಶುರು ಮಾಡಿ ವಿದೇಶದಲ್ಲೂ ಪ್ರಸಿದ್ಧಿ ಪಡೆದಿದ್ದಾರೆ. ವಿಡಿಯೋದಲ್ಲಿ ಕಾಣಿಸಿಕೊಳ್ಳುವ ಸುದರ್ಶನ್ ಭಟ್, ಅಪ್ಪಟ ಹಳ್ಳಿ ಶೈಲಿಯಲ್ಲಿ ಅಡುಗೆ ಮಾಡ್ತಾರೆ.
ಮನೆ ಸುತ್ತಮುತ್ತ ತೋಟವಿದ್ದು, ತಮಗೆ ಬೇಕಾದ ತರಕಾರಿ, ವಸ್ತುವನ್ನು ಅಲ್ಲಿಂದಲೇ ತಂದು, ಕ್ಲೀನ್ ಮಾಡಿ, ಒಂದಿಂಚು ಬಿಡದೆ ಅಡುಗೆ ತೋರಿಸುವ ಅವರ ಪರಿ ಹಾಗೂ ಮಾತು ವೀಕ್ಷಕರನ್ನು ಸೆಳೆದಿದೆ. ಇದೇ ಕಾರಣಕ್ಕೆ ಯುಟ್ಯೂಬ್ ಶುರು ಮಾಡಿದ ಒಂದೇ ವರ್ಷದಲ್ಲಿ ನಾಲ್ಕು ಲಕ್ಷ ಚಂದಾದಾರರನ್ನು ಪಡೆದಿತ್ತು ಇವರ ಯುಟ್ಯೂಬ್. 2020 ರಲ್ಲಿ ಶುರುವಾದ ಇವರ ಯುಟ್ಯೂಬ್ ಚಾನೆಲ್ ಈಗ 1. 18 ಮಿಲಿಯನ್ ಸಬ್ಸ್ಕ್ರೈಬ್ ಹೊಂದಿದೆ. ವಿಡಿಯೋ ಪೋಸ್ಟ್ ಮಾಡಿದ ಗಂಟೆಯಲ್ಲೇ ಲಕ್ಷಗಟ್ಟಲೆ ವಿವ್ಸ್ ಬರುತ್ತದೆ.
ಭಟ್ ಎನ್ ಭಟ್ ಚಾನೆಲ್ ಯಶಸ್ಸಿಗೆ ಮನೆಯ ಎಲ್ಲ ಸದಸ್ಯರು ಕೆಲಸ ಮಾಡ್ತಿದ್ದಾರೆ. ಕಾನೂನು ಕಲಿತಿರುವ ಸುದರ್ಶನ್ ಭಟ್ ಅಡುಗೆ ಮಾಡಿದ್ರೆ, ಸಹೋದರ ಎಡಿಟಿಂಗ್ ಜವಾಬ್ದಾರಿ ಹೊತ್ತಿದ್ದಾರೆ. ಅಕ್ಕ ಕೂಡ ಸಬ್ ಟೈಟಲ್ ಸೇರಿದಂತೆ ಯುಟ್ಯೂಬ್ ಕೆಲಸದಲ್ಲಿ ಸಹಾಯ ಮಾಡ್ತಾರೆ. ಇನ್ನು ಅಪ್ಪ – ಅಮ್ಮ ಸೇರಿದಂತೆ ಮನೆಯವರೆಲ್ಲ ಸಾಂಪ್ರದಾಯಿಕ ಅಡುಗೆ ಸೇರಿದಂತೆ ಕೆಲ ಅಡುಗೆಗಳ ಬಗ್ಗೆ ಸುದರ್ಶನ್ ಅವರಿಗೆ ಸಲಹೆ ನೀಡ್ತಾರೆ. ಇನ್ಮುಂದೆ ಹೆಂಡ್ತಿ ಕೂಡ ಭಟ್ ಜೊತೆ ಅಡುಗೆ ಮಾಡ್ತಾರೆ ಎನ್ನುವ ನಿರೀಕ್ಷೆಯಲ್ಲಿ ವೀಕ್ಷಕರಿದ್ದಾರೆ.