ಸಮಗ್ರ ನ್ಯೂಸ್: ಮುಂದಿನ ಎರಡು- ಮೂರು ದಿನಗಳಲ್ಲಿ ದಕ್ಷಿಣ ರಾಜಸ್ಥಾನ, ಗುಜರಾತ್, ಕೊಂಕಣ, ಗೋವ, ಮಧ್ಯ ಮಹಾರಾಷ್ಟ್ರ ಮತ್ತು ಕರಾವಳಿ ಕರ್ನಾಟಕದಲ್ಲಿ ಅತಿ ಭಾರಿಯಿಂದ ಅತ್ಯಂತ ಭಾರಿ, ಅಂದರೆ 12.5 ಸೆಂಟಿಮೀಟರ್ನಿಂದ 20 ಸೆಂಟಿಮೀಟರ್ ವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಈ ವಾರ ದಿಲ್ಲಿ, ಹರ್ಯಾಣ ಮತ್ತು ಉತ್ತರಪ್ರದೇಶದಲ್ಲಿ ಚದುರಿದ ಮತ್ತು ಗುಡುಗುಸಹಿತ ಮಳೆಯಾಗಬಹುದು. ಎರಡು ತೀವ್ರ ಹವಾಮಾನ ವ್ಯವಸ್ಥೆಗಳು ರೂಪುಗೊಂಡಿರುವುದರಿಂದ ಮುಂಗಾರು ಚುರುಕಾಗುತ್ತಿದೆ ಎಂದು ಇಲಾಖೆ ಹೇಳಿದೆ.
ಪೂರ್ವ ಭಾರತದಲ್ಲಿ, ಗಂಗಾ ನದಿ ಆವೃತ ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ ಮತ್ತು ಜಾರ್ಖಂಡ್ನಲ್ಲಿ ಭಾರೀ, ಅಂದರೆ 6.45 ಸೆಂಟಿ ಮೀಟರ್ನಿಂದ 20 ಸೆಂಟಿಮೀಟರ್ವರೆಗೆ ಮಳೆಯಾಗುವ ನಿರೀಕ್ಷೆಯಿದೆ.
ಹೊಸದಾಗಿ ರೂಪುಗೊಂಡಿರುವ ಹವಾಮಾನ ವ್ಯವಸ್ಥೆಗಳು ರಾಜಸ್ಥಾನ ಮತ್ತು ಗಂಗಾ ನದಿ ಆವೃತ ಪಶ್ಚಿಮ ಬಂಗಾಳದಲ್ಲಿ ಚುರುಕಾಗಿವೆ ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಎಮ್. ಮೊಹಾಪಾತ್ರ ಹೇಳಿದ್ದಾರೆ. ‘‘ಗುಜರಾತ್ನಲ್ಲಿ ಅತ್ಯಂತ ಭಾರೀ ಮಳೆಯಾಗುತ್ತಿದೆ. ಆ ವಲಯದಲ್ಲಿ ಅತಿ ಭಾರೀ ಮಳೆ ಮುಂದುವರಿಯಲಿದೆ. ಪೂರ್ವ ಭಾರತದಲ್ಲೂ ಭಾರೀ ಮಳೆ ಸುರಿಯಲಿದೆ. ದಿಲ್ಲಿ, ರಾಷ್ಟ್ರೀಯ ರಾಜಧಾನಿ ವಲಯ (ಎನ್ಸಿಆರ್), ಹರ್ಯಾಣ ಮತ್ತು ಪಂಜಾಬ್ನಲ್ಲಿ ಈ ವಾರ ಚುದುರಿದ ಹಾಗೂ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ದಿನಕಳೆದಂತೆ ಮಳೆಯ ಪ್ರಮಾಣ ಹೆಚ್ಚಲಿದೆ’’ ಎಂದು ಮೊಹಾಪಾತ್ರ ತಿಳಿಸಿದರು.
ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ 12 ಸೆ.ಮೀ.ನಿಂದ 20 ಸೆ.ಮೀ.ವರೆಗೆ ಮಳೆಯಾಗುವ ಸಂಭವ ಇದ್ದು, ಈ ಎರಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ವೇಗದ ಗಾಳಿಯೊಂದಿಗೆ ಭಾರೀ ಮಳೆ ಸುರಿಯಲಿದೆ. ಕರಾವಳಿಯಲ್ಲಿ ಆ.27ರಿಂದ 31ರವರೆಗೆ ರೆಡ್ ಅಲರ್ಟ್ ಇದ್ದು, ಅವಧಿಯಲ್ಲಿ 115.6ಮಿಮೀ.ಗಿಂತ ಅಧಿಕ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರದ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.