Ad Widget .

ಆತ ಬರೀ ಭಗವಂತನಲ್ಲ; ಧರ್ಮದ ಸಾರಥಿ| ಬೆಣ್ಣೆ ಮೆತ್ತಿಕೊಂಡ ಹುಡುಗನ ಎತ್ತಿ ಕೊಂಡಾಡೋಣ ಬನ್ನಿ…

ಸಮಗ್ರ ವಿಶೇಷ: ಮಣ್ಣು ತಿಂದ ಬಾಯಲ್ಲಿ ಬ್ರಹ್ಮಾಂಡವನ್ನೇ ತೋರಿಸಿದರೂ ಆತ ಬರೀ ಭಗವಂತನಲ್ಲ, ಆತ ಬೆಣ್ಣೆ ಮೆತ್ತಿಕೊಂಡ ಪುಟ್ಟ ಹುಡುಗ. ಆದರೆ ಕೇವಲ ಬಾಲ್ಯಲೀಲೆಯ ತುಂಟ ಮಾತ್ರನಲ್ಲ, ಪೂತನಿಯ ಸಾವಿಗೆ ಕಾರಣನಾಗಿ, ಗೋವರ್ಧನ ಗಿರಿಧಾರಿಯಾಗಿ ಗೋಪಿಕೆಯರ ಜೊತೆಯಿದ್ದೂ ಪರಿಶುದ್ಧ ಪ್ರೇಮದ ಪ್ರತೀಕವಾಗುತ್ತಲೇ ತನ್ನಬಣ್ಣ ಮತ್ತು ಹೆಸರನ್ನೇ ಹೊತ್ತಿದ್ದ ಕೃಷ್ಣೆಗೆ (ದ್ರ್ರೌಪದಿ) ಅಕ್ಷಯವಸ್ತ್ರ ನೀಡಿದ ದಯಾಳುವಾಗಿ ಕಂಡವನು. ದ್ರೌಪದಿ ಸಮೇತ ಪಾಂಡವರನ್ನು ದೂರ್ವಾಸ ಮುನಿಯ ಕೋಪದಿಂದ ತಪಿಸಲು ಅನ್ನದ ಅಗುಳು ತಿಂದು ಕಾಪಾಡಿದವನು. ಕಾಳಿಂಗಮರ್ದನಕ್ಕೆ ಸೆಟೆದು ನಿಂತವನು. ಸತ್ಯಭಾಮೆಯ ಅಹಮ್ಮಿಗೆ ತೂಗದೆ, ರುಕ್ಮಿಣಿಯ ತುಳಸೀದಳದ ಪ್ರೀತಿಗೆ ತಲೆಬಾಗಿದವನು.

Ad Widget . Ad Widget .

ಗೀತಾಚಾರ್ಯನಾಗಿ, ಪಾಂಡವರ ವಿಜಯಸಾರಥಿಯಾಗಿ ಧರ್ಮದ ಗೆಲುವಿಗೆ ಕಾರಣನಾದವನು. ಹೀಗಾಗಿಯೇ ಶ್ರೀಕೃಷ್ಣ ಬಾಲಕನಾಗಿಯೂ ಪ್ರೀತಿಯ ಸಂಕೇತವಾಗಿಯೂ ಗೋಚರಿಸುತ್ತಲೇ ದುರ್ಯೋಧನ, ಜರಾಸಂಧರಂಥ ಅಧಮರ ಸಂಹಾರಕ್ಕೆ ಕಾರಣೀಭೂತನಾಗಿ, ಶಿಶುಪಾಲನ ನೂರು ತಪ್ಪುಗಳಾದ ಮೇಲೆ ಸುದರ್ಶನ ಚಕ್ರದಿಂದ ವಧಿಸಿ, ಅವನಿಗೆ ದಾರಿ ಕಾಣಿಸಿದವನು. ಹೀಗೆ ಭಿನ್ನ-ವಿಭಿನ್ನ ಸನ್ನಿವೇಶಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಸನ್ಮಾರ್ಗದ ಮತ್ತು ಸಂಪ್ರೀತಿಯ ಮೌಲ್ಯವನ್ನು ಪ್ರತಿಪಾದಿಸಿದವನು. ಆದ್ದರಿಂದ ಒಂದು ನಿರ್ದಿಷ್ಟ ಕಕ್ಷೆಯಲ್ಲಿ ಬಂಧಿಯಾಗದ ಕೃಷ್ಣ ಹತ್ತು ಹಲವು ಆಯಾಮಗಳಲ್ಲಿ ಸಾಕ್ಷಾತ್ಕಾರಗೊಂಡು ವಿಶ್ವಾತ್ಮಕನಾದವನು. ಸರ್ವವ್ಯಾಪ್ತ , ಸರ್ವಶಕ್ತ ಮತ್ತು ಸರ್ವಾಂತರ್ಯಾಮಿಯಾದ ಮಾಧವ ಎಲ್ಲ ಮಾನವಕುಲಕ್ಕೂ ಪೂರಕ ಮತ್ತು ಪ್ರೇರಕಬಲದ ಸಂಜೀವ ಸ್ಫೂರ್ತಿ.

Ad Widget . Ad Widget .

ಮಹಾಭಾರತದ ಉದ್ದಗಲಕ್ಕೂ ಚಾಚಿಕೊಂಡಿರುವ ಶ್ರೀಕೃಷ್ಣ ಪಾಂಡವ ಪಕ್ಷಪಾತಿ, ಕುತಂತ್ರಿ ಎಂದೂ ತಿಳಿಯುವ ಮಂದಿಯದು ಅಪಕ್ವ ಆಲೋಚನೆಗಳ ಅಭಿಪ್ರಾಯವಷ್ಟೆ. ಆತ ಪಾಂಡವರನ್ನು ಮಾತ್ರ ಬೆಂಬಲಿಸುವಂತಿದ್ದಿದ್ದರೆ, ಗರ್ವದಿಂದ ಕೊಬ್ಬಿ ವಿವೇಕವನ್ನು ಮರೆತ ಅರ್ಜುನನಿಗೆ ಮಗನಾದ ಬಭ್ರುವಾಹನನಿಂದಲೇ ಪಾಠ ಕಲಿಸುತ್ತಿರಲಿಲ್ಲ, ಅರ್ಜುನನೊಂದಿಗೇ ಕದನವಾಗುವ ‘ಶ್ರೀಕೃಷ್ಣಾರ್ಜುನ ಯುದ್ಧ’ ಈ ರೀತಿಯ ಹಮ್ಮುಸೊಮ್ಮುಗಳನ್ನು ಒಡೆಯುವ ಉದ್ದೇಶ ಹೊಂದಿದ್ದು ಸುಸ್ಪಷ್ಟವಾಗಿದೆ. ಆದರೆ ಅದೇ ಅರ್ಜುನನನ್ನು ಕರ್ಣನ ನಾಗಾಸ್ತ್ರದಿಂದ ಪಾರು ಮಾಡಿ, ಅಂಗುಷ್ಠದಿಂದ ರಥವನ್ನು ಒತ್ತಿ ಕಿರೀಟಿಯ ಕಿರೀಟ ಮಾತ್ರ ಬೀಳುವಂತೆ ಮಾಡಿದ ಕೃಷ್ಣ ಪಾಂಡವ ಪಕ್ಷಪಾತಿಯಲ್ಲ, ಸದ್ಧರ್ಮದ ಉಳಿವಿಗೆ ಶ್ರಮಿಸಿದ ಅಧ್ವರ್ಯು.

ಗೊಲ್ಲನೆಂದು ಜರೆದ ದುರ್ಯೋಧನನಿಗೆ ತಾನು ದೈವವೆಂದು ತೋರಿಸಿಯೂ ಆತ ಅರಿಯದೆ ಮಾಯಾವಿಯೆಂದು ಬೈದಾಗ ಜಂಬ-ದಂಭಗಳಿಗೆ ತಕ್ಕ ಶಾಸ್ತಿ ಮಾಡುವ ಕ್ರಿಯೆ-ಪ್ರಕ್ರಿಯೆಗಳೆರಡೂ ಅತ್ಯಂತ ಸಮರ್ಪಕ ಮತ್ತು ಸ್ವಾಭಾವಿಕವಾದುದು. ಭೀಷ್ಮ-ವಿದುರರಿಗೆ ಅರ್ಥವಾದ ಇವನ ಹಿರಿಮೆ-ಗರಿಮೆಗಳು ಕೌರವರಿಗೆ ತಿಳಿಯದೇ ಹೋಗಿದ್ದರ ಫಲವೇ ದುರ್ಯೋಧನ ಅನೇಕ ಅಕ್ಷೋಹಿಣಿ ಸ್ಯೆನ್ಯಬಲಕ್ಕೆ ಹಂಬಲಿಸಿ ಮಣ್ಣುಮುಕ್ಕಿದ. ಆದರೆ ಮುರಾರಿಯ ಮಹಾನ್ ಚ್ಯೆತನ್ಯದ ಅರಿವಿದ್ದ ಪಾಂಡವರು ಅವನು ಸಮರಕ್ಕಿಳಿಯದಿದ್ದರೂ ಅವನ ಉಪಸ್ಥಿತಿಯಿದ್ದರೆ ಸಾಕು ಎಂದು ಆಶ್ರಯಿಸಿ ಕೆಚ್ಚೆದೆಯ ವೀರ ಗೆಲುವು ಕಂಡರು. ಅಪ್ರತಿಮ ಧನುರ್ಧರನಾದ ಕರ್ಣನ ಸಾವು ರುಕ ಹುಟ್ಟಿಸುತ್ತದಾದರೂ ಆ ಸಮಯದಲ್ಲಿ ಕರ್ಣನ ಅವಸಾನವಾಗಲೇಬೇಕಿತ್ತು. ದುರ್ಯೋಧನನ ತೊಡೆಯ ಭಾಗವೂ ವಜ್ರಕಾಯವಾಗಿಬಿಟ್ಟರೆ ಅವನ ಮೇಲಿನ ಭೀಮವಿಜಯ ಅಸಾಧ್ಯ ಎಂದು ತಿಳಿದ್ದಿದ್ದರಿಂದಲೇ ಕೃಷ್ಣ, ಸುಯೋಧನನ ತೊಡೆ ಶಕ್ತಿಹೀನಗೊಳಿಸಿದ. ಇದಕ್ಕಾಗಿ ಗಾಂಧಾರಿಯ ಶಾಪಕ್ಕೆ ಒಳಗಾಗಿ ತನ್ನಅವತಾರದ ಪರಿಸಮಾಪ್ತಿಗೆ ತಾನೇ ನಾಂದಿ ಹಾಡಿಕೊಂಡ. ಅಹಂಕಾರ ಮತ್ತು ಪೂಜ್ಯರ ಬಗೆಗಿನ ತಾತ್ಸಾರ ಭಾವಕ್ಕೆ ತನ್ನ ಯಾದವ ಕುಲವೇ ಒನಕೆ ಹಿಡಿದು ಬಡಿದಾಡಿಕೊಂಡು ನಿರ್ನಾಮವಾದ ವ್ಯಥೆಯ ಜೊತೆಜೊತೆಗೆ ಛಿದ್ರಗೊಳ್ಳುವ ಸ್ಥಿತಿಯ ಪ್ರಕ್ಷುಬ್ಧ ಶೂನ್ಯದ ಅನರ್ಥವನ್ನೂ ಲೋಕದ ಎದುರಿಗಿಟ್ಟ ಅಗಾಧ ಸಂಯಮಿ ಈ ಯದುಕುಲ ನಂದನ ಎನ್ನುವುದನ್ನು ತಿಳಿದಾಗಲೇ ಅಂತಹ ಅನಂತಸ್ವರೂಪಿಯ ಅವಿಚ್ಛಿನ್ನ ಅಂತಃಸತ್ವಮತ್ತು ಸತ್ಯದ ದರ್ಶನವಾಗುವುದು ಸಾಧ್ಯ, ಅವನ ಬಗೆಗಿನ ಪೂರ್ವಗ್ರಹಪೀಡಿತ ಮತ್ತು ಉಪೇಕ್ಷೆಯ ಅರೆಬರೆ ಅನಿಸಿಕೆಗಳು ದೂರವಾಗಲು ಸಾಧ್ಯವಾಗುವುದು.

ಗೋವುಗಳನ್ನು ರಕ್ಷಿಸುವ ಗೋವಿಂದನಾಗಿ, ‘ಬಂದದ್ದೆಲ್ಲ ಬರಲಿ, ಗೋವಿಂದನ ದಯೆಯಿರಲಿ’ ಎಂಬ ಆರ್ತ ಮೊರೆಗೆ ಮಿಡಿಯುವ ಮನಸ್ಸಿನ ಮಧುಸೂದನನು ಸಕ್ಕೂಬಾಯಿಯ ಭಕ್ತಿಗೂ ತುಕಾರಾಮನ ಶ್ರದ್ಧೆಗೂ ಒಲಿದವನು. ಮಡಿಕೆ ಮಾಡುವ ಕುಂಬಾರನಿಂದ ಮೀರಾಬಾಯಿಯ ಹೃದಯದಲ್ಲೂ ನೆಲೆ ನಿಂತ ನಂದಗೋಕುಲದ ನಂದನ, ಆನಂದದ ಭಾಗ, ಭಾವವಾಗಿದ್ದವನ ಜನ್ಮದಿನ ಗೋಕುಲಾಷ್ಟಮಿ. ಅಯ್ಯಂಗಾರ್ ಪಂಗಡದಲ್ಲಿ ಭರ್ಜರಿಯಾಗಿ ಆಚರಿಸಲ್ಪಡುವ ಈ ಹಬ್ಬ ತಿಂಡಿತಿನಿಸುಗಳ ಸವಿಯಲ್ಲಿ ಶ್ರೀಶನ ನೆನಕೆಯಲ್ಲಿ ಸಂಭ್ರಮದ ಲವಲವಿಕೆಯನ್ನು ತರುತ್ತದೆ. ಮನೆಯಲ್ಲಿ ಹಾಕಲಾಗುವ ಮುರಳೀಧರನ ಹೆಜ್ಜೆ ಗುರುತುಗಳು ಅವನ ಇರುವಿಕೆಯನ್ನು ಕೇವಲ ಮನೆಮನೆಗಳಲ್ಲಿ ಅಷ್ಟೇ ಅಲ್ಲದೆ, ಬದುಕಿನ ಎಲ್ಲೆಡೆಗಳಲ್ಲೂ ಹೃದಯಸ್ಥ್ಥಗೊಳಿಸಿಕೊಳ್ಳುವ ಇತ್ಯಾತ್ಮಕ ಸಾಫಲ್ಯದ ತಿರುಳಿದೆ.

ನಮ್ಮ ಕವಿಗಳ ಮನಸ್ಸಿನಲ್ಲಿ ಅನನ್ಯ ಜಾಗವನ್ನು ಆಕ್ರಮಿಸಿಕೊಂಡಿರುವವನು ಶ್ರೀಕೃಷ್ಣ. ಕವಿ ಪುತಿನ ಅವರಿಗಂತೂ ಅವನು ಪ್ರಿಯವಾದ ದೈವ. ತಮ್ಮ ‘ಗೋಕುಲಾಷ್ಟಮಿ’ ಎಂಬ ಪ್ರಬಂಧದಲ್ಲಿ ಅವರು ಈ ಹಬ್ಬದ ಇಡೀ ಪರಿಸರವನ್ನು ನೇರವಾಗಿ ಕಣ್ಮುಂದೆ ತಂದು ನಿಲ್ಲಿಸುತ್ತಾರೆ. ಅವರ ‘ಗೋಕುಲ ನಿರ್ಗಮನ’ ಮತ್ತು ‘ಶ್ರೀಹರಿ ಚರಿತೆ’ಯಲ್ಲೂ ಅವನ ಚೆಲುವಿನ ವೈಭವವಿದೆ. ಅಷ್ಟೇಕೆ, ‘ಆಲಿಸು ಕೃಷ್ಣನ ಕೊಳಲಿನ ಕರೆ…’ ಎಂಬ ದಿವ್ಯ ಸಮಾಧಾನದ ಪ್ರಶಾಂತ ಸ್ಥಿತಿಯಲ್ಲೂ ಪುತಿನ ಅವರು ಗೋಪನನ್ನೇ ಮನಗಂಡಿದ್ದಾರೆ. ಭಾಗವತ ಚಿಂತನೆಯ ಈ ಕವಿಯಷ್ಟೇ ಸಾರ್ಥಕವಾದ ವಿನಮ್ರತೆಯಲ್ಲಿ ಕೃಷ್ಣನನ್ನು ಪರಿಭಾವಿಸಿದವರು ಎಚ್.ಎಸ್. ವೆಂಕಟೇಶಮೂರ್ತಿ. ‘ಅಮ್ಮಾ ನಾನು ದೇವರಾಣೆ, ಬೆಣ್ಣೆ ಕದ್ದಿಲ್ಲಮ್ಮ / ಎಲ್ಲಾ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ….’ ಎಂಬ ಮುಗ್ಧತೆಯನ್ನು ಚಿತ್ರಿಸುತ್ತಲೇ, ಶ್ರೀಕೃಷ್ಣನೊಂದಿಗೆ ಚಿರವಿರಹಿಯಾಗಿಯೇ ಉಳಿದ ರಾಧೆಯ ಬಗ್ಗೆಯೂ ತಮ್ಮ ಇನ್ನೊಂದು ಕವಿಯಲ್ಲಿ ಅವರು ‘ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆಯೇ ಒಂದು ಹೆಣ್ಣು, ನನಗೋ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು’ ಎಂದಿದ್ದಾರೆ. ಕೃಷ್ಣನ ಆಟಪಾಟಗಳ ವಿನೋದಾವಳಿಗೆ ಮನಸೋತು ಅದನ್ನು ಅಮೋಘವಾದ ಕಾವ್ಯದ ಲಾಲಿತ್ಯದಲ್ಲಿ ತಂದ ಕವಿ ನಿಸಾರ್ ಅಹಮದ್. ‘ಬೆಣ್ಣೆ ಕದ್ದ ನಮ್ಮ ಕೃಷ್ಣ / ಬೆಣ್ಣೆ ಕದ್ದನಮ್ಮಾ /ಬೆಣ್ಣೆ ಕದ್ದು ಜಾರುತ ಬಿದ್ದು / ಮೊಳಕಾಲೂದಿಸಿಕೊಂಡನಮ್ಮಾ / ಬಿಂದಿಗೆ ಬಿದ್ದು, ಸಿಡಿಯಲು ಸದ್ದು / ಬೆಚ್ಚಿದ ಗೋಪಿ ತುಂಟನಮ್ಮಾ….’ ಎನ್ನುವಾಗ ಅವರ ಸಹಜತೆಗೆ ಮನಸ್ಸು ಹಿಗ್ಗುತ್ತದೆ.

ಕೃಷ್ಣನನ್ನೇ ತಮ್ಮ ಕೀರ್ತನೆಗಳ ಅಂಕಿತವನ್ನಾಗಿಸಿಕೊಂಡ ದಾಸವರೇಣ್ಯರೆಂದರೆ ವ್ಯಾಸರಾಯರು. ‘ಕೃಷ್ಣ ನೀ ಬೇಗನೆ ಬಾರೋ’ ಎಂಬ ಕೀರ್ತನೆಯಲ್ಲಿ ತಾನು ನಂಬಿದ ದೇವರ ದರ್ಶನಕ್ಕಾಗಿ ಹಂಬಲಿಸುವ ಶರಣಾರ್ಥದ ಗುಣವಿದೆ. ಪುರಂದರದಾಸರಂತೂ ‘ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ…’ ಎನ್ನುತ್ತಲೇ, ‘ಪಿಳ್ಳಂಗೋವಿಯ ಚೆಲ್ವಕೃಷ್ಣನ ಎಲ್ಲಿ ನೋಡಿದಿರಿ?’ ಎಂಬ ಹುಡುಕಾಟದ ಪ್ರಶ್ನೆಯನ್ನೂ ಹಾಕುತ್ತಾರೆ. ಅವರಿಗೆ ಅವನು ‘ಯಾದವ ನೀ ಬಾ ಯದುಕುಲ ನಂದನ/ ನೋಡುವೆ ಮನದಣಿಯೆ’ ಎಂಬ ಕೃತಕೃತ್ಯ ಭಾವ ಮೂಡಿಸುವಂ ಸ್ವಾಮಿಯಾಗಿಯೂ ‘ಗುಮ್ಮನ ಕರೆಯದಿರೆ, ಅಮ್ಮಾ ನೀನು…’ ಎಂದು ತಾಯಿಯನ್ನು ಬೇಡಿಕೊಳ್ಳುವ ಏನೂ ಅರಿಯದ ಬಾಲಕನಾಗಿಯೂ ಕಾಣುತ್ತಾನೆ. ‘ಈ ಪರಿಯ ಸೊಬಗ ಇನ್ನಾವ ದೇವರಲೂ ಕಾಣೆ’ ಎಂಬ ಅವರ ಕೀರ್ತನೆಯಲ್ಲಿ ಇತರ ದೈವವನ್ನು ಕಡೆಗಣಿಸುವ ಇರಾದೆ ಇಲ್ಲ, ಬದಲಾಗಿ ಶ್ರೀಕೃಷ್ಣನನ್ನು ಜೀವನಪೂರ್ತಿ ಆರಾಧಿಸಿದ ಮತ್ತು ಅವನ ರೂಪಸ್ವರೂಪಗಳನ್ನು ಮನಸಾರೆ ಅನುಭವಿಸಿದ ಉತ್ಕಟ ರಸಾನುಭೂತಿಯ ಭಾವುಕತೆಯಲ್ಲಿ ಇಂಥ ತೀವ್ರವಾದ ಅಭಿವ್ಯಕ್ತಿ ಹರಳುಗಟ್ಟಿರಬೇಕು.

ಕಾಗಿನೆಲೆಯ ಆದಿಕೇಶವನಲ್ಲೇ ತಮ್ಮ ಸಾಯುಜ್ಯದ ದಾರಿ ಕಂಡುಕೊಂಡ ಮಹಾನ್ ದಾಸ ಕನಕದಾಸರು. ಬಾಳಿನಲ್ಲಿ ಎದುರಾದ ಹಲವು ನೋವು-ನುರಿಗೆ ಹೆದರದೆ, ‘ತಲ್ಲಣಿಸದಿರು ಕಂಡ್ಯ ತಾಳು ಮನವೇ…’ ಎನ್ನುವ ಸಾಂತ್ವನದಲ್ಲಿ ಅವರು ಬಾಳಿದವರು. ಆದರೂ ಹರಿಸಾಕ್ಷಾತ್ಕಾರ ದುರ್ಲಭವೇನೋ ಎನಿಸುವಂತಾದಾಗ ‘ಯಾರು ಬದುಕಿದರು ಹರಿ ನಿನ್ನ ನಂಬಿ…’ ಎಂಬ ನಿಂದಾಸ್ತುತಿ ಹಾಡಿದರೂ ‘ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ…’ ಎಂಬ ಸತ್ಯದ ಬೆಳಕನ್ನು ಬಯಸಿದವರು. ಸರ್ಪವಾಗಿ ಶ್ರೀಹರಿ ಕಂಡಾಗ ‘ಈತನೀಗ ವಾಸುದೇವನು ಲೋಕದೊಡೆಯ’ ಎಂದೂ, ಉಡುಪಿಯಲ್ಲಿ ದರ್ಶನ ಸಿಗದಿರಲು, ‘ಬಾಗಿಲನು ತೆರೆದು ಸೇವೆಯನು ಕೊಡೋ ಹರಿಯೇ / ಕೂಗಿದರೂ ದನಿ ಕೇಳಲಿಲ್ಲವೇ, ನರಹರಿಯೇ’ ಎಂದು ಅವನನ್ನು ಪ್ರತ್ಯಕ್ಷವಾಗಿಸಿಕೊಂಡು ಕನಕನ ಕಿಂಡಿಯ ಮೂಲಕ ಧಿಮಾಕಿನ ಜನಕ್ಕೆ ದೈವಸಮರ್ಪಣಾ ಗುಣವನ್ನು ಮನದಟ್ಟು ಮಾಡಿಕೊಟ್ಟವರು ಅವರು.

ಕೃಷ್ಣ ಉಪಾಯಗಾರ, ಅವನು ತುಸು ಠಕ್ಕ, ಆ ಮುರಳೀಧರ ಭಾರೀ ಕಿಲಾಡಿ, ಈ ಗೊಲ್ಲ ಅನುಪಮ ರಾಜನೀತಿಜ್ಞ, ದೇವಕೀಸುತನಾದ ಈತ ವಿಶ್ವರೂಪ ತೋರಿದವನು, ಪಾರ್ಥನಿಗೆ ಸಾರಥಿಯಾಗಿ ಅವನನ್ನು ಯುದ್ಧಕ್ಕೆ ಎಳೆದವನು ಎಂಬುದೆಲ್ಲ ನಿಜವೇ. ಆದರೆ, ನಮ್ಮ ನಿತ್ಯಜೀವನದಲ್ಲಿ ಅವೆಲ್ಲ ತುಂಬಾ ಹೊತ್ತು ಉಳಿಯುವುದಿಲ್ಲ. ಅವನನ್ನು ಎರಡು ನಿಮಿಷ ತದೇಕಚಿತ್ತದಿಂದ ನೋಡಿದರೆ ಸಾಕು, ದಿನವಿಡೀ ಖುಷಿ ಇರುತ್ತದೆ. ಅವನ ನಸುನಗೆಯನ್ನು ಕಣ್ತುಂಬಿಕೊಂಡರೆ ಸಾಕು, ಬದುಕಿನಲ್ಲಿ ಪುಳಕದ ತರಂಗಗಳೇಳುತ್ತವೆ. ನಮಗೆಲ್ಲ ಬೇಕಾಗಿರುವುದು ಇದೇ ತಾನೇ? ಇದೇ ನಮ್ಮನ್ನು ಆಗಾಗ್ಗೆ ಕೈಬೀಸಿ ಕರೆಯುವ ಮೋಹನ ಮುರಳಿ!
(ಸಂಗ್ರಹದಿಂದ)

Leave a Comment

Your email address will not be published. Required fields are marked *