ಸಮಗ್ರ ನ್ಯೂಸ್: ಪ್ಯಾರಿಸ್ ಒಲಿಂಪಿಕ್ಸ್ ಚಿನ್ನದ ಪದಕದ ಸ್ಪರ್ಧೆಯಿಂದ ಅನರ್ಹಗೊಂಡ ಕುಸ್ತಿಪಟು ವಿನೇಶ್ ಪೋಗಟ್ ಶನಿವಾರ ಭಾರತಕ್ಕೆ ಆಗಮಿಸಿದ್ದಾರೆ. ದೆಹಲಿಯ ವಿಮಾನ ನಿಲ್ದಾಣದಲ್ಲಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ಪದಕ ಗೆಲ್ಲಲಾಗದ ನೋವಿನಲ್ಲಿದ್ದ ವಿನೇಶ್ ಅಭಿಮಾನಿಗಳನ್ನು ಕಂಡ ತಕ್ಷಣ ಜೋರಾಗಿ ಅಳುತ್ತಾ ಕೈ ಮುಗಿದು ಧನ್ಯವಾದ ತಿಳಿಸಿದರು. ಕುಟುಂಬದ ಸದಸ್ಯರು, ಮಾಜಿ ಒಲಿಂಪಿನ್, ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಸೇರಿ ಹಲವು ಕುಸ್ತಿಪಟುಗಳು ಈ ವೇಳೆ ಜತೆಗಿದ್ದರು.
ವಿಮಾನ ನಿಲ್ದಾಣದಿಂದ ಹೊರ ಬಂದ ತಕ್ಷಣ ವಿನೇಶ್ ಸಾಕ್ಷಿ ಮಲಿಕ್ ಅವರ ಎದೆಗಪ್ಪಿಕೊಂಡು ಕಣ್ಣೀರು ಸುರಿಸಿದ ದೃಶ್ಯ ಕಂಡು ಒಂದು ಕ್ಷಣ ನೆರದಿದ್ದ ಕ್ರೀಡಾಭಿಮಾನಿಗಳು ಕೂಡ ಅತ್ಯಂತ ಭಾವುಕರಾಗಿ ನಿಂತು ಬಿಟ್ಟರು.ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಕುಸ್ತಿ 50 ಕೆ.ಜಿ ವಿಭಾಗದಲ್ಲಿ ಉತ್ಕೃಷ್ಟ ಪ್ರದರ್ಶನ ತೋರುವ ಮೂಲಕ ಫೈನಲ್ ತಲುಪಿದ್ದ ವಿನೇಶ್ ಅವರು ಇನ್ನೇನು ಫೈನಲ್ ಆಡಲು ಕೆಲವೇ ಗಂಟೆಗಳು ಬಾಕಿ ಇರುವಾಗ ಅವರನ್ನು ಅನರ್ಹ ಎಂದು ಘೋಷಿಸಲಾಯಿತು. ದೇಹತೂಕದಲ್ಲಿ ನಿಗದಿತ ಸ್ಪರ್ಧೆಯ ತೂಕಕ್ಕಿಂತ 100 ಗ್ರಾಂ ಹೆಚ್ಚಾದ ಕಾರಣಕ್ಕೆ ಅವರು ಅನರ್ಹಗೊಂಡಿದ್ದರು.

ಸ್ವಾತಂತ್ರ್ಯ ದಿನಾಚರಣೆಯಂದು ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಸ್ಪರ್ಧಿಸಿ ತವರಿಗೆ ಮರಳಿರುವ ಭಾರತದ ಕ್ರೀಡಾಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ಸಂವಾದ ನಡೆಸಿದ್ದರು. ಈ ವೇಳೆ ವಿನೇಶ್ ಫೋಗಟ್ ಸಾಧನೆ ಕುರಿತು ಪ್ರಧಾನಿ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದರು. “ವಿನೇಶ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದು ನಮ್ಮ ಪಾಲಿಗೆ ಹೆಮ್ಮೆಯ ಕ್ಷಣವಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.