ಸಮಗ್ರ ನ್ಯೂಸ್: ಶಿರೂರಿನಲ್ಲಿ ಭೂಕುಸಿತವಾಗಿ ಒಂದು ತಿಂಗಳು ಕಳೆದರು ಶುಕ್ರವಾರ (ಆ.16) ಸಹ ಈಶ್ವರ್ ಮಲ್ಪೆ ನೇತೃತ್ವದಲ್ಲಿ ಕಾಣೆಯಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಘಟ್ಟ ಪ್ರದೇಶದಲ್ಲಿ ಮಳೆಯಿಂದ ನದಿ ನೀರು ಮಣ್ಣು ಮಿಶ್ರಿತವಾಗಿದ್ದು, ಇದರಿಂದ ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ. ಈ ಹಿನ್ನಲೆಯಲ್ಲಿ ಇಂದು ಗಂಗಾವಳಿ ನದಿಯಲ್ಲಿ ಬಿದ್ದಿರುವ ಎರಡು ಆಲದ ಮರವನ್ನು ಹೊರೆತೆಗೆಯಲು ನೌಕಾದಳ ಸಿದ್ಧತೆ ಮಾಡಿಕೊಂಡಿದೆ. ಕಾರ್ಯಾಚರಣೆಯಲ್ಲಿ NDRF ಹಾಗೂ SDRF ತಂಡ ಸಹ ಭಾಗಿಯಾಗಿದೆ. ನದಿ ನೀರಿನ ಪ್ರಮಾಣ ಕಡಿಮೆ ಇದ್ದು, ಗಂಗಾವಳಿ ನದಿಯಲ್ಲಿ ಬಿದ್ದಿರುವ ಎರಡು ಆಲದ ಮರವನ್ನು ಮೇಲೆತ್ತಲು ರೋಪ್ ಅಳವಡಿಸಿ ಕ್ರೇನ್ ಮೂಲಕ ಎಳೆಯಲು ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನು ಈಶ್ವರ್ ಮಲ್ಪೆ ತಂಡ ನೀರಿನಲ್ಲಿ ಮುಳುಗಿರುವ ಲಾರಿಗೆ ರೋಪ್ ಕಟ್ಟಿ ಮೇಲೆತ್ತಲು ವ್ಯವಸ್ಥೆ ಮಾಡುತ್ತಿದ್ದಾರೆ.
ಜೊತೆಗೆ ಭೂ ಕುಸಿತವಾದ ಪ್ರದೇಶದಲ್ಲಿ ಇದ್ದ ಅಂಗಡಿ ಬಳಿ ಮೆಟಲ್ ಡಿಟೆಕ್ಟರ್ ಮೂಲಕ ಹುಡುಕಾಟ ಮಾಡಲಾಗುತ್ತಿದೆ. ಹೆಸ್ಕಾಂನಿಂದ ವಿದ್ಯುತ್ ತಂತಿ ಹಾಗೂ ಕಂಬ ಅಳವಡಿಸುವ ಕಾರ್ಯ ನಡೆಯುತ್ತಿದೆ. ನದಿ ತೀರದ ಪ್ರದೇಶದಲ್ಲಿ ಎರಡು ಭಾಗಗಳಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದ್ದು, ರೆಡಾರ್ ಮೂಲಕ ನದಿ ಭಾಗದಲ್ಲಿ ಹುಡುಕಾಟ ಮಾಡಲಾಗುತ್ತಿದೆ. ಎರಡು ಭಾಗದಲ್ಲಿ ಭಾರವಾದ ಕಬ್ಬಿಣದ ವಸ್ತುಗಳು ಇರುವುದು ಪತ್ತೆಯಾಗಿದೆ. ಕಾರ್ಯಾಚರಣೆ ನಡೆಸಿ ಇದನ್ನೂ ತೆಗೆಯಲು ರಕ್ಷಣಾ ತಂಡ ಮುಂದಾಗಿದೆ.