ಸಮಗ್ರ ನ್ಯೂಸ್: ಸುಳ್ಯದ ಗುತ್ತಿಗಾರು ಗ್ರಾಮದ ಕಮಿಲದ ಬಾಂಧವ್ಯ ಗೆಳೆಯರ ಬಳಗವು ಭಾನುವಾರ ಬಳ್ಪ-ಕಮಿಲ ರಸ್ತೆಯ ಸುಮಾರು 2 ಕಿಮೀ ಕಾಡಿನ ನಡುವೆ ಹಾದು ಹೋಗುವ ರಸ್ತೆಯ ಇಕ್ಕೆಲೆಗಳಲ್ಲಿ ಸ್ವಚ್ಛತೆಯನ್ನು ಮಾಡಿದರು. ಕಾಡು-ಪರಿಸರ ಸಂರಕ್ಷಣೆ, ಸ್ವಚ್ಛತೆಯ ಉದ್ದೇಶದಿಂದ ಕೆಲಸಕ್ಕೆ ಇಳಿದ ಯುವಕರಿಗೆ ಕಾಡಿನ ದಾರಿಯಲ್ಲಿ ದೊರೆತದ್ದು 2 ಲೋಡ್ ಪಿಕ್‌ಅಪ್‌ನಲ್ಲಿ ತುಂಬುವಷ್ಟು ತ್ಯಾಜ್ಯ. ಇನ್ನೂ ಇದೆ. ಇದು ಒಂದು ದಿನ ಕೆಲಸ.

ಕಮಿಲದ ಬಾಂಧವ್ಯ ಗೆಳೆಯರ ಬಳಗವು ಅರಣ್ಯದ ಕಾಳಜಿಯ ಉದ್ದೇಶದೊಂದಿಗೆ ಆರಂಭದಲ್ಲಿ ಕಾಡಿನ ದಾರಿಯಲ್ಲಿ ಸ್ವಚ್ಛತೆ ಹಾಗೂ ಜಾಗೃತಿ ಫಲಕದ ಕಾರ್ಯಕ್ಕೆ ಮುಂದಾದರು. ಕಾಡಿನ ನಡುವೆ ಹಾದು ಹೋಗುವ ರಸ್ತೆಯ ಇಕ್ಕೆಲೆಗಳಲ್ಲಿ ಸ್ವಚ್ಛತೆಯನ್ನು ಮಾಡಿದರು. ಅದರ ಜೊತೆಗೇ ಜಾಗೃತಿ ಫಲಕಗಳನ್ನು ಅಳವಡಿಕೆ ಮಾಡಿದರು. ಅರಣ್ಯ ಇಲಾಖೆ ಕೂಡಾ ಸಹಯೋಗ ನೀಡಿ ಸಿಸಿಟಿವಿ ಅಳವಡಿಕೆ ಮಾಡಿ ಕಸ ಎಸೆಯುವವರ ಪತ್ತೆ ಮಾಡುವ ಹಂತಕ್ಕೂ ಈ ಕೆಲಸ ಬಂದಿದೆ. ಇಲಾಖೆಯೂ ಬಹಳ ಆಸಕ್ತಿಯಿಂದ ಯುವಕರ ತಂಡಕ್ಕೆ ಸಹಕಾರ ನೀಡಿದೆ. ಮುಂದೆ ಯುವಕರ ತಂಡವು ವೀಕ್ಷಣೆ ಮಾಡುತ್ತದೆ, ತ್ಯಾಜ್ಯ ಎಸೆಯುವವರನ್ನು ಸಿಸಿಟಿವಿಯಲ್ಲಿ ಮಾತ್ರವೇ ಅಲ್ಲ, ಯಾರೇ ಆಗಲಿ ತ್ಯಾಜ್ಯ ಎಸೆಯುವವರನ್ನು ಕಂಡರೆ ತಕ್ಷಣವೇ ಫೋಟೋ ಸಹಿತ ಇಲಾಖೆಗಳಿಗೆ ಮಾಹಿತಿ ನೀಡುವ ಬಗ್ಗೆಯೂ ಯುವಕರು ನಿರ್ಧರಿಸಿದ್ದಾರೆ. ಕಾಡಿನಲ್ಲಿ ಕಸ ಎಸೆದು ಹೋಗುವುದು ಈಚೆಗೆ ಹೆಚ್ಚಾಗಿದೆ. ಬಾಟಲಿಗಳು, ಪ್ಲಾಸ್ಟಿಕ್ ಗಳು, ಸಿಮೆಂಟ್ ತ್ಯಾಜ್ಯಗಳನ್ನು ಕಾಡಿನ ರಸ್ತೆ ಬದಿ ಎಸೆದು ಹೋಗುವುದು ಕಂಡುಬರುತ್ತಿದೆ. ಈ ಬಗ್ಗೆ ಎಚ್ಚರಿಸಿದರೂ ಮತ್ತೆ ಕಾಡಿನಲ್ಲಿ ಕಸದ ರಾಶಿ ಕಂಡುಬರುತ್ತದೆ. ಇದಕ್ಕಾಗಿ ಯುವಕರ ಈ ತಂಡವು ಜಾಗೃತವಾಗಿದೆ. ಇದರ ಜೊತೆಗೆ ಕಾಡಿನ ರಸ್ತೆಯ ಬದಿಯಲ್ಲಿ ವಿಷಪೂರಿತ ಹಾವುಗಳನ್ನೂ ಬಿಡದಂತೆ ಮನವಿಯನ್ನೂ ಮಾಡಿದ್ದರು ಯುವಕರು, ಇದಕ್ಕಾಗಿ ಈ ಫಲಕವೂ ಇದೇ ವೇಳೆ ಅಳವಡಿಕೆ ಮಾಡಲಾಯಿತು. ರಸ್ತೆ ಬದಿ ತ್ಯಾಜ್ಯ ಎಸೆದರೆ ಅದು ನೀರಿಗೆ ಸೇರಿ ಅದೇ ನೀರನ್ನು ಸ್ಥಳೀಯರು ಕುಡಿಯಬೇಕಾದ ಪರಿಸ್ಥಿತಿ ಇರುತ್ತದೆ. ಅಷ್ಟೇ ಅಲ್ಲ ಕಾಡುಪ್ರಾಣಿಗಳೂ ಈ ಪ್ಲಾಸ್ಟಿಕ್‌ಗಳನ್ನು ತಿಂದು ಸಂಕಷ್ಟ ಉಂಟಾಗುವ ಸಾಧ್ಯತೆಯೂ ಇದೆ. ಈ ಎಲ್ಲಾ ಕಾರಣಗಳಿಂದ ಯುವಕರ ತಂಡವು ಮಾದರಿ ಕಾರ್ಯ ಮಾಡಿದೆ.
ಕಾಡು ಉಳಿಯಬೇಕು, ಪರಿಸರ ಸೌಂದರ್ಯ ಆಸ್ವಾದಿಸಬೇಕು ಎಂದು ಬಯಸುವ ಎಲ್ಲರೂ ಕಮಿಲದ ಬಾಂಧವ್ಯ ಗೆಳೆಯರ ಬಳಗದ ಕಾರ್ಯವನ್ನು ಶ್ಲಾಘಿಸಿದ್ದಾರೆ. ಇದೇ ಮಾದರಿ ಎಲ್ಲಾ ಕಡೆಯೂ ಕಾಡು ರಸ್ತೆಯಲ್ಲಿ ತ್ಯಾಜ್ಯ ಎಸೆಯದಂತೆ ಯುವಕರ ತಂಡವು ಎಚ್ಚರಿಸಿ ವಹಿಸಿ ಜಾಗೃತಿ ಮೂಡಿಸುವ ಕೆಲಸ ನಡೆಸಬೇಕಿದೆ. ಈ ಮೂಲಕವೂ ಪರಿಸರ ಪ್ರೀತಿಯನ್ನು, ಪರಿಸರ ಉಳಿವನ್ನು ಮಾಡಲು ಸಾಧ್ಯವಿದೆ.

ಈ ಸಂದರ್ಭ ಪ್ರಮುಖರಾದ ತಾಪಂ ಮಾಜಿ ಸದಸ್ಯ ಅಶೋಕ್ ನೆಕ್ರಾಜೆ, ಗ್ರಾಪಂ ಸದಸ್ಯರುಗಳಾದ ಲತಾ ಆಜಡ್ಕ, ಭರತ್ ಕಮಿಲ, ಗುತ್ತಿಗಾರು ಪ್ರಾಥಮಿಕ ಸಹಕಾರಿ ಸಂಘದ ನಿರ್ದೇಶಕ ಜಯಪ್ರಕಾಶ್ ಮೊಗ್ರ, ಪ್ರಮುಖರಾದ ರಾಧಾಕೃಷ್ಣ ತುಪ್ಪದಮನೆ, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿಗಳಾದ ಸಂತೋಷ್ , ಧರ್ಣಪ್ಪ, ಭರಮಪ್ಪ, ಧನಂಜಯ , ಗಣೇಶ್ ಹೆಗ್ಡೆ ಇದ್ದರು. ಬಾಂಧವ್ಯ ಗೆಳೆಯರ ಬಳಗದ ಅಧ್ಯಕ್ಷ ತುಂಗನಾಥ ಕಾಯನಕೋಡಿ, ಕಾರ್ಯದರ್ಶಿ ಹರ್ಷಿತ್ ಕಾಂತಿಲ, ಸದಸ್ಯರುಗಳಾದ ಚೇತನ್ ಕಾಂತಿಲ, ಪವನ್ ಕಾಂತಿಲ, ನಿತ್ಯಾನಂದ ಅಂಬೆಕಲ್ಲು ಕಮಿಲ, ವಿನಯಚಂದ್ರ ಕಾಂತಿಲ, ಉದಯಕುಮಾರ್ ಕಾಂತಿಲ, ಭರತ್ ಕಾಂತಿಲ, ಕುಸುಮಾಧರ ಕಾಂತಿಲ, ತನ್ವಿತ್ , ನಿರಂಜನ ಕಾಂತಿಲ, ಪ್ರಣಾಮ್, ಜಯಪ್ರಕಾಶ್ ಕಾಂತಿಲ, ವೆಂಕಟ್ರಮಣ ಮೊದಲಾದವರಿದ್ದರು.

ಕಾಡಿನ ದಾರಿಯಲ್ಲಿ ಎಲ್ಲೆಂದರಲ್ಲಿ ಕಸ ಎಸೆದು ಹೋಗುತ್ತಾರೆ. ಅದರ ಜೊತೆಗೆ ವಿಷಪೂರಿತ ಹಾವುಗಳನ್ನು ರಸ್ತೆ ಬದಿಯೇ ಬಿಟ್ಟು ಹೋಗುತ್ತಾರೆ, ರಸ್ತೆಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರೂ ನಡೆದಾಡುವ ಪ್ರದೇಶ ಇದು. ಹೀಗಾಗಿ ರಸ್ತೆ ಬದಿ ವಿಷಪೂರಿತ ಹಾವುಗಳನ್ನು ಬಿಡುವುದು, ಕಸ ಎಸೆಯುವುದು ಮಾಡಬಾರದು. ಪರಿಸರ ಸ್ವಚ್ಛತೆಯ ಕಾರ್ಯವನ್ನು ಮಾಡಿದ್ದೇವೆ. ಮುಂದೆ ಈ ಪ್ರದೇಶದಲ್ಲಿ ನಮ್ಮ ಯುವಕರೂ ತ್ಯಾಜ್ಯ ಎಸೆಯುವುದರ ಬಗ್ಗೆ ಗಮನಿಸುತ್ತಾರೆ ಎಂದು ಹೇಳುತ್ತಾರೆ ಬಾಂಧವ್ಯ ಗೆಳೆಯರ ಬಳಗದ ಅಧ್ಯಕ್ಷ ತುಂಗನಾಥ ಕಾಯನಕೋಡಿ.
