ಸಮಗ್ರ ನ್ಯೂಸ್: ವಿಶ್ವ ವಿಖ್ಯಾತ ಮೈಸೂರು ದಸರಾ-2024 ಆಚರಣೆಗೆ ಮುಹೂರ್ತ ಫಿಕ್ಸ್ ಆಗಿದೆ. ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದೆ. ಈ ಬಾರಿ ಅಕ್ಟೋಬರ್ 3ರಿಂದ 12ರವರೆಗೆ ಅದ್ಧೂರಿಯಾಗಿ ದಸರಾ ಆಚರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ದಸರಾ 2024 ಉನ್ನತ ಮಟ್ಟದ ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಮೈಸೂರು ಜಿಲ್ಲಾ ಉಸ್ತುವಾರಿ ಮಹದೇವಪ್ಪ, ಸಚಿವರಾದ ಕೆ.ವೆಂಕಟೇಶ್, ಕೆಜೆ ಜಾರ್ಜ್, ಹಿರಿಯ ಶಾಸಕ ಜಿಟಿ ದೇವೇಗೌಡ ಸೇರಿ ಮೈಸೂರು-ಕೊಡಗು, ಚಾಮರಾಜನಗರ ಭಾಗದ ಶಾಸಕರು, ಎಂಎಲ್‌ಸಿಗಳು ಭಾಗಿಯಾಗಿದ್ದರು.
ಅಕ್ಟೋಬರ್ 3ರಿಂದ 12ರವರೆಗೆ ಅದ್ಧೂರಿ ದಸರಾ ಆಚರಣೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಅ.3ರಂದು ದಸರಾ ಉದ್ಘಾಟನೆ ನಡೆಯಲಿದೆ, 12 ರಂದು ಜಂಬೂಸವಾರಿ ನಡೆಯಲಿದೆ. ಈ ಕಾರ್ಯಕ್ರಮ ಯಾರಿಂದ ಉದ್ಘಾಟನೆ ಮಾಡಿಸಬೇಕು ಎಂದು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ತಿಳಿಸಿದರು.
ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ನಾಡಹಬ್ಬ ಮೈಸೂರು ದಸರಾವನ್ನು ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಕಳೆದ ಬಾರಿ ಬರಗಾಲದ ಕಾರಣ ಅದ್ಧೂರಿಯಾಗಿ ಆಚರಿಸಲು ಆಗಿರಲಿಲ್ಲ. ಈ ಬಾರಿ ರಾಜ್ಯದಾದ್ಯಂತ ಉತ್ತಮ ಮಳೆಯಾಗಿದ್ದು, ಬಹುತೇಕ ಎಲ್ಲಾ ಜಲಾಶಯಗಳು ತುಂಬಿವೆ. ಈ ಹಿನ್ನೆಲೆಯಲ್ಲಿ ದಸರಾವನ್ನು ವಿಜೃಂಭಣೆಯಿಂದ ಜನರ ಹಬ್ಬವನ್ನಾಗಿ ಆಚರಿಸಲು ಮಾಡಲು ತೀರ್ಮಾನಿಸಲಾಗಿದೆ ಎಂದರು. ಅಷ್ಟೇ ಅಲ್ಲದೆ ಈ ಬಾರಿ 21 ದಿನಗಳ ಕಾಲ ದೀಪಾಲಂಕಾರ ಇರಲಿದೆ.